ರಾಜು ಕನ್ನಡ ಮೀಡಿಯಂ ಚಿತ್ರ ಗೆಲ್ಲಿಸಿದ ಕನ್ನಡ ಜನತೆಗೆ ಅಭಿನಂದನೆಗಳು: ಚಿತ್ರನಟ ಗುರುನಂದನ್

ಕಡೂರು, ಜ.30: ಚಿತ್ರ ಬಿಡುಗಡೆಯಾಗಿ 2 ವಾರಗಳಾಗಿದ್ದು, ಬಿಡುಗಡೆಯಾಗಿರುವ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ತುಂಬಿದ ಗೃಹದಲ್ಲಿ ಪ್ರದರ್ಶನಗೊಳ್ಳುತ್ತಿದೆ. ನಮ್ಮ ಚಿತ್ರವನ್ನು ಗೆಲ್ಲಿಸಿದ ಇಡೀ ರಾಜ್ಯದ ಕನ್ನಡದ ಜನತೆಗೆ ಅಭಿನಂದಿಸಲಾಗುವುದು ಎಂದು ರಾಜು ಕನ್ನಡ ಮೀಡಿಯಂ ಚಿತ್ರದ ನಾಯಕ ಗುರುನಂದನ್ ತಿಳಿಸಿದರು.
ಅವರು ಮಂಗಳವಾರ ಕಡೂರು ಅನ್ನಪೂರ್ಣ ಚಿತ್ರಮಂದಿರದಲ್ಲಿ ರಾಜು ಕನ್ನಡ ಮೀಡಿಯಂ ಚಿತ್ರ ವೀಕ್ಷಿಸಿ ಪತ್ರಕರ್ತರೊಂದಿಗೆ ಮಾತನಾಡಿದರು. ಬಹಳ ದಿನಗಳ ನಂತರ ಇಡೀ ಕುಟುಂಬ ಚಿತ್ರಮಂದಿರಕ್ಕೆ ಬಂದು ನೋಡುವಂತಹ ಚಿತ್ರ ಬಂದಿದೆ. ಮೊಮ್ಮಕ್ಕಳಿಂದ ಹಿಡಿದು ಅಜ್ಜಂದಿರವರೆಗೆ ಚಿತ್ರಮಂದಿರಗಳಿಗೆ ಬಂದು ಚಿತ್ರ ವೀಕ್ಷಿಸುತ್ತಿರುವುದು ಸಂತಸ ಮೂಡಿಸಿದೆ ಎಂದು ಹೇಳಿದರು.
ಹಲವು ಕಾರಣಗಳಿಗಾಗಿ ಜನ ಈ ಚಿತ್ರವನ್ನು ವೀಕ್ಷಿಸುತ್ತಿದ್ದಾರೆ. ಇದುವರೆಗೂ ಯಾರೂ ಸಹ ಶೂಟಿಂಗ್ ಮಾಡದ ಥೈಲ್ಯಾಂಡ್‍ನಲ್ಲಿ ಸುಮಾರು 300 ಅಡಿ ನೀರಿನ ಆಳದಲ್ಲಿ ಚಿತ್ರವನ್ನು ಶೂಟಿಂಗ್ ಮಾಡಲಾಗಿದೆ. ಚಿತ್ರ ಚೆನ್ನಾಗಿ ಮೂಡಿ ಬಂದರೆ ಕನ್ನಡದ ಜನತೆ ಎಂದಿಗೂ ಕೈಬಿಡುವುದಿಲ್ಲ. ಈಗ ಚಿತ್ರವನ್ನು ಗೆಲ್ಲಿಸಿರುತ್ತಾರೆ. ಇನ್ನೂ ದೊಡ್ಡಮಟ್ಟದಲ್ಲಿ ಚಿತ್ರವನ್ನು ಗೆಲ್ಲಿಸಬೇಕಿದೆ. ಯಶಸ್ವಿಯಾಗಿ 100 ದಿನ ಚಿತ್ರ ಪ್ರದರ್ಶನವಾಗಬೇಕಿದೆ ಎಂದರು.
ನನ್ನದು ಮೂಡಿಗೆರೆ ಸಮೀಪದ ಗೋಣಿಬೀಡು ಗ್ರಾಮ. ನನ್ನ ಜಿಲ್ಲೆಯ ಬಗ್ಗೆ ಅಪಾರವಾದ ಗೌರವ ಇರುವುದರಿಂದ ಕಡೂರು ಪಟ್ಟಣಕ್ಕೆ ಆಗಮಿಸಿದ್ದೇನೆ. ಈ ಚಿತ್ರದಲ್ಲಿ ಸುದೀಪ್‍ರವರು ಅಭಿನಯಿಸಿರುವುದು ಖುಷಿ ತಂದಿದೆ. ಕಡೂರು ಪಟ್ಟಣದ ಸುದೀಪ್ ಅಭಿಮಾನಿಗಳು ಸರ್ಕಾರಿ ಶಾಲೆಯ ಮಕ್ಕಳಿಗೆ ಚಿತ್ರವನ್ನು ತೋರಿಸುವ ನಿರ್ಧಾರ ಕೈಗೊಂಡಿರುವುದು ಹರ್ಷ ತಂದಿದೆ ಎಂದು ತಿಳಿಸಿದರು.
ಸದ್ಯದಲ್ಲಿಯೇ ಈ ಚಿತ್ರವು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈಗಾಗಲೇ ಅಮೇರಿಕಾ, ಸಿಂಗಾಪೂರ್, ಮಲೇಷಿಯ ಮುಂತಾದ ದೇಶಗಳಲ್ಲಿ ಚಿತ್ರ ತೆರೆ ಕಾಣಲಿದೆ. ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿಯೂ ಹೆಚ್ಚಿನ ಬೇಡಿಕೆ ಬಂದಿದೆ. ಚಿತ್ರವನ್ನು ಗೆಲ್ಲಿಸಿದ ರಾಜ್ಯದ ಜನತೆಗೆ ಅಭಿನಂದನೆ ಸಲ್ಲಿಸಲು ಇಡೀ ರಾಜ್ಯದ ಎಲ್ಲಾ ಚಿತ್ರಮಂದಿರಗಳಿಗೆ ಭೇಟಿ ನೀಡಲು ಪ್ರವಾಸ ಕೈಗೊಳ್ಳಲಾಗಿದೆ. ಇದು ನನ್ನ 2ನೇ ಚಿತ್ರವಾಗಿದೆ. ಮುಂದಿನ ಯೋಜನೆಯ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದರು.
ಕಡೂರು ತಾಲೂಕು ಸುದೀಪ್ ಸೇನಾ ಸಮಿತಿ ವತಿಯಿಂದ ಪಟಾಕಿ ಸಿಡಿಸಿ ನಾಯಕ ನಟನಿಗೆ ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಚಿತ್ರಮಂದಿರದ ಮಾಲೀಕರಾದ ಸೋಮಶೇಖರ್, ಸಿಬ್ಬಂದಿ ವರ್ಗ, ಸುದೀಪ್ ಸೇನಾ ಸಮಿತಿಯ ಅಧ್ಯಕ್ಷ ರಾಜು, ಟೈಲರ್ ಉಪಸ್ಥಿತರಿದ್ದರು.







