ಫೆಬ್ರವರಿ 4ರಂದು ಭೂಮಿಯನ್ನು ಹಾದುಹೋಗಲಿದೆ ಅಪಾಯಕಾರಿ ಕ್ಷುದ್ರಗ್ರಹ

ಹೊಸದಿಲ್ಲಿ, ಜ.30: ಫೆಬ್ರವರಿ 4ರಂದು ಅಪಾಯಕಾರಿ ಕ್ಷುದ್ರಗ್ರಹವೊಂದು ಭೂಮಿಯನ್ನು ಹಾದುಹೋಗಲಿದೆ. ಆದರೆ ಈ ಆಕಾಶಕಾಯವು ಭೂಮಿಗೆ ಅಪ್ಪಳಿಸುವ ಸಾಧ್ಯತೆಗಳು ಬಹಳ ವಿರಳ ಎಂದು ಖಗೋಳಶಾಸ್ತ್ರಜ್ಞರು ತಿಳಿಸಿದ್ದಾರೆ.
2002 ಎಜೆ 129 ಎಂದು ಹೆಸರಿಸಲಾಗಿರುವ ಆಕಾಶಕಾಯವು 1.1 ಕಿ.ಮೀ ಉದ್ದವಾಗಿದ್ದು ಭೂಮಿಯನ್ನು 4,208,641 ಕಿ.ಮೀ ದೂರದಿಂದ ಹಾದುಹೋಗಲಿದೆ. ಇದು ಬಾಹ್ಯಾಕಾಶ ಲೆಕ್ಕಾಚಾರದ ಪ್ರಕಾರ ಅತ್ಯಂತ ಸಮೀಪದ ಅಂತರವಾಗಿದೆ. ಉದಾಹರಣೆಗೆ ಭೂಮಿ ಮತ್ತು ಚಂದ್ರನ ನಡುವಿನ ಅಂತರ 384,400 ಕಿ.ಮೀ ಎಂದು ಖಗೋಳಶಾಸ್ತ್ರಜ್ಞರು ತಿಳಿಸಿದ್ದಾರೆ. ಯಾವುದೇ ಆಕಾಶಕಾಯವು ಭೂಮಿಯಿಂದ 7,403,00 ಕಿ.ಮೀಗಿಂತಲೂ ಕಡಿಮೆ ಅಂತರದಲ್ಲಿ ಹಾದುಹೋಗುವುದಾದರೆ ಅಂಥವುಗಳನ್ನು ನಾಸಾ ಅಪಾಯಕಾರಿ ಎಂದು ಘೋಷಿಸುತ್ತದೆ.
ಪ್ರಸಕ್ತ ವರ್ಷದಲ್ಲಿ ಭೂಮಿಯ ಅತ್ಯಂತ ಸಮೀಪದಲ್ಲಿ ಹಾದುಹೋಗುವ ಕ್ಷದ್ರಗ್ರಹಗಳಲ್ಲಿ 2002 ಎಜೆ 129 ಅತ್ಯಂತ ದೊಡ್ಡ ಗಾತ್ರದಾಗಿದ್ದು ಒಂದು ವೇಳೆ ಭೂಮಿಗೆ ಅಪ್ಪಳಿಸಿದ್ದೇ ಆದಲ್ಲಿ ಸಣ್ಣ ಹಿಮಕಾಲವನ್ನೇ ಸೃಷ್ಟಿಸಲಿದೆ ಎಂದು ತಜ್ಞರು ತಿಳಿಸಿದ್ದಾರೆ.





