ಆದಿತ್ಯನಾಥ್ ಆಡಳಿತದಲ್ಲಿ ಭ್ರಷ್ಟಾಚಾರ ಹೆಚ್ಚಳ: ಉತ್ತರ ಪ್ರದೇಶ ಸಚಿವ

ಲಕ್ನೋ, ಜ. 31: ಉತ್ತರ ಪ್ರದೇಶದಲ್ಲಿ ಆದಿತ್ಯನಾಥ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಿದೆ ಎಂದು ಸಚಿವ ಓಂಪ್ರಕಾಶ್ ರಾಜ್ಭಾರ್ ಹೇಳಿಕೆ ನೀಡಿದ್ದಾರೆ. ಸಂಪುಟ ಸಹೋದ್ಯೋಗಿಯೊಬ್ಬರು ಇಂಥ ಹೇಳಿಕೆ ನೀಡಿರುವುದರಿಂದ ಯೋಗಿ ಸರ್ಕಾರಕ್ಕೆ ಮುಖಭಂಗವಾಗಿದೆ.
ಬಿಜೆಪಿ ವಕ್ತಾರ ಇದನ್ನು ಅಲ್ಲಗಳೆದಿದ್ದು, ಅಗ್ಗದ ಪ್ರಚಾರ ಪಡೆಯುವ ತಂತ್ರ ಇದು ಎಂದು ಟೀಕಿಸಿದ್ದಾರೆ. ರಾಜ್ಭಾರ್ ಅವರಿಗೆ ಯಾವುದೇ ಅಹವಾಲು ಗಳಿದ್ದಲ್ಲಿ ಸೂಕ್ತ ವೇದಿಕೆಯಲ್ಲಿ ಅದನ್ನು ತಿಳಿಸಬೇಕಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ.
"ಹಿಂದಿನ ಬಿಎಸ್ಪಿ ಹಾಗೂ ಎಸ್ಪಿ ಸರ್ಕಾರಗಳ ಅವಧಿಗೆ ಹೋಲಿಸಿದರೆ, ಬಿಜೆಪಿ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ ಅಧಿಕವಾಗಿದೆ. ನಾನು ಸರ್ಕಾರದ ಭಾಗವಾಗಿದ್ದರೂ, ಇದು ನನ್ನ ಸರ್ಕಾರವಲ್ಲ. ನಾವು ಬಿಜೆಪಿ ಜತೆ ಮೈತ್ರಿಯನ್ನಷ್ಟೇ ಮಾಡಿಕೊಂಡಿದ್ದೇವೆ" ಎಂದು ಪಿಟಿಐ ಜತೆ ದೂರವಾಣಿಯಲ್ಲಿ ಮಾತನಾಡಿದ ಸಚಿವರು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿಯ ಮಿತ್ರಪಕ್ಷವಾಗಿರುವ ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷದ ಮುಖಂಡರಾಗಿರುವ ರಾಜ್ಭಾರ್ ಅವರು, ಪ್ರಸ್ತುತ ಸರ್ಕಾರದಲ್ಲಿ ತಮ್ಮ ಪಕ್ಷಕ್ಕೆ ಸೂಕ್ತ ಗೌರವ ಸಿಕ್ಕಿಲ್ಲ ಎಂದೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಿದ್ದಾಗಿಯೂ ಅವರು ಹೇಳಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳಲಾಗುತ್ತದೆಯೇ ಎಂದು ಕೇಳಿದ ಪ್ರಶ್ನೆಗೆ, ಅದು ಬಿಜೆಪಿಯನ್ನು ಅವಲಂಬಿಸಿದೆ ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಾಡಿದಂತೆ ಬಿಜೆಪಿ ಮೈತ್ರಿ ಮಾಡಿಕೊಳ್ಳದಿದ್ದರೆ, ಏಕಾಂಗಿಯಾಗಿ ತಮ್ಮ ಪಕ್ಷ ಸ್ಪರ್ಧಿಸುತ್ತದೆ ಎಂದು ಸ್ಪಷ್ಟಪಡಿಸಿದರು.
ರಾಜ್ಭಾರ್ ಅವರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ರಾಕೇಶ್ ತ್ರಿಪಾಠಿ, ಚುನಾವಣಾಪೂರ್ವ ಮೈತ್ರಿಯನ್ನು ಮುರಿದುಕೊಳ್ಳುವುದು ಪಕ್ಷದ ಸಂಪ್ರದಾಯವಲ್ಲ ಎಂದು ಹೇಳಿದ್ದಾರೆ.