6ನೇ ವೇತನ ಆಯೋಗದ ವರದಿ ಸಲ್ಲಿಕೆ

ಬೆಂಗಳೂರು, ಜ. 31: ರಾಜ್ಯ ಸರಕಾರಿ ನೌಕರರ ವೇತನವನ್ನು 2017ರ ಜುಲೈ 1ರಿಂದ ಪೂರ್ವಾನ್ವಯ ಆಗುವಂತೆ ಶೇ.30ರಷ್ಟು ಹೆಚ್ಚಿಸಬೇಕು ಎಂದು ಆರನೇ ವೇತನ ಆಯೋಗ ಶಿಫಾರಸ್ಸು ಮಾಡಿದೆ.
ಬುಧವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಆರನೇ ವೇತನ ಆಯೋಗದ ಅಧ್ಯಕ್ಷ ಎಂ.ಆರ್.ಶ್ರೀನಿವಾಸಮೂರ್ತಿ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ವರದಿಯನ್ನು ಸಲ್ಲಿಸಿದರು. ಆಯೋಗದ ಶಿಫಾರಸ್ಸಿನಿಂದ ರಾಜ್ಯದ 5.20 ಲಕ್ಷ ಸರಕಾರಿ ನೌಕರರಿಗೆ ಪ್ರಯೋಜನವಾಗಲಿದೆ.
ರಾಜ್ಯದ ಅನುದಾನಿತ ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು, ಪದವಿ ಶಿಕ್ಷಣ ವಿದ್ಯಾಲಯಗಳು, ವಿಶ್ವ ವಿದ್ಯಾಲಯಗಳಲ್ಲಿನ 73 ಸಾವಿರ ಬೋಧಕೇತರ ಸಿಬ್ಬಂದಿಗೂ ಆರನೇ ವೇತನ ಆಯೋಗದ ಶಿಫಾರಸು ಅನ್ವಯವಾಗಲಿದೆ ಎಂದು ತಿಳಿದು ಬಂದಿದೆ.
ಕನಿಷ್ಠ ವೇತನ 17ಸಾವಿರ ರೂ.ಮತ್ತು ಗರಿಷ್ಠ ವೇತನ 1.50ಲಕ್ಷ ರೂ. ಹಾಗೂ 8,500 ರೂ.ಕನಿಷ್ಠ ಮತ್ತು 75,300 ರೂ.ಗರಿಷ್ಠ ಪಿಂಚಣಿ ನಿಗದಿಪಡಿಸಬೇಕು ಎಂದು ಆಯೋಗ ಶಿಫಾರಸ್ಸು ಮಾಡಿದೆ. ಇದರಿಂದಾಗಿ ಈವರೆಗೆ ‘ಡಿ’ ದರ್ಜೆ ನೌಕರರಿಗಿದ್ದ ಆರಂಭಿಕ ಕನಿಷ್ಠ ಮೂಲವೇತನ 9,600 ರೂ. ಇನ್ನೂ 17 ಸಾವಿರ ರೂ.ಗಳಿಗೆ ಏರಿಕೆಯಾಗಲಿದೆ. ಶೇ 45.25ರಷ್ಟಿದ್ದ ತುಟ್ಟಿಭತ್ತೆ ಮೂಲವೇತನದಲ್ಲಿ ವಿಲೀನವಾಗಲಿದೆ.
ಎಪ್ರಿಲ್‌ನಿಂದ ಪಾವತಿ: ಆರನೇ ವೇತನ ಆಯೋಗದ ಶಿಫಾರಸಿನ ಅನ್ವಯ ಪರಿಷ್ಕೃತ ದರವನ್ನು 2018ರ ಎಪ್ರಿಲ್ 1ರಿಂದ ಪಾವತಿಸಬೇಕಾಗುತ್ತದೆ. ಇದರಿಂದ ರಾಜ್ಯ ಸರಕಾರದ ಬೊಕ್ಕಸಕ್ಕೆ ವಾರ್ಷಿಕ 10,508 ಕೋಟಿ ರೂ.ಹೆಚ್ಚುವರಿ ಹೊರೆಯಾಗಲಿದೆ ಎಂದು ಅಂದಾಜು ಮಾಡಲಾಗಿದೆ.
ಪ್ರಮುಖ ಶಿಫಾರಸ್ಸುಗಳು: ಹಾಲಿ ಸರಕಾರಿ ನೌಕರರ ನಿವೃತ್ತಿ ವಯಸ್ಸನ್ನೂ 60 ವರ್ಷಗಳಿಗೆ ಮುಂದುವರಿಸಬೇಕು. ಸ್ವಯಂ ನಿವೃತ್ತಿಗೆ ಕನಿಷ್ಠ ಸೇವಾ ಅರ್ಹತೆ ಮಿತಿ 15ರಿಂದ 10 ವರ್ಷಕ್ಕೆ ಇಳಿಕೆ ಮಾಡಬೇಕು. ಪೂರ್ಣ ಪ್ರಮಾಣದ ಪಿಂಚಣಿ ಪಡೆಯಲು ಇರುವ ವಯಸ್ಸಿನ ಅರ್ಹತೆಯನ್ನು 33 ವರ್ಷಗಳಿಗೆ ಬದಲಾಗಿ 30 ವರ್ಷಗಳಿಗೆ ಇಳಿಕೆ ಮಾಡಬೇಕು.
ಮನೆ ಬಾಡಿಗೆ ಭತ್ತೆಯನ್ನು ಪರಿಷ್ಕೃತ ಮೂಲ ವೇತನ ಆಧರಿಸಿ ಶೇ.24, ಶೇ.16 ಮತ್ತು ಶೇ.8ರಂತೆ ಪರಿಷ್ಕರಿಸಬೇಕು. ಪಿಂಚಣಿ ಮತ್ತು ಕುಟುಂಬ ಪಿಂಚಣಿಯನ್ನು ಪ್ರಸಕ್ತ ಮೂಲ ಪಿಂಚಣಿಯ ಶೇ.30ರಷ್ಟು ಹೆಚ್ಚಳ ಮಾಡಬೇಕೆಂಬುದು ಸೇರಿದಂತೆ ಇನ್ನಿತರ ಮಹತ್ವದ ಶಿಫಾರಸ್ಸುಗಳಿವೆ ಎಂದು ಗೊತ್ತಾಗಿದೆ.
80 ವರ್ಷ ಮೇಲ್ಪಟ್ಟ ಪಿಂಚಣಿದಾರರಿಗೆ ಹೆಚ್ಚುವರಿ ಪಿಂಚಣಿ ಸಂದಾಯ ಸೌಲಭ್ಯವನ್ನು ಆಯೋಗ ಪ್ರಸ್ತಾಪಿಸಿದ್ದು, 80ರಿಂದ 85ವರ್ಷದ ಪಿಂಚಣಿದಾರರಿಗೆ ಶೇ.20ರಷ್ಟು, 85ರಿಂದ 90ವರ್ಷದ ವರಿಗೆ ಶೇ.30ರಷ್ಟು, 95 ವರ್ಷದೊಳಗಿನವರಿಗೆ ಶೇ.40ರಷ್ಟು 95ರಿಂದ 100ವರ್ಷದೊಳಗಿನವರಿಗೆ ಶೇ.50ರಷ್ಟು 100ವರ್ಷ ಮೇಲ್ಪಟ್ಟವರಿಗೆ ಶೇ.100ರಷ್ಟು ಹೆಚ್ಚುವರಿ ಪಿಂಚಣಿಯನ್ನು ನೀಡಲು ಶಿಫಾರಸು ಮಾಡಲಾಗಿದೆ.
ನಗರ ಪರಿಹಾರ ಭತ್ತೆ, ಪ್ರಯಾಣ ಭತ್ತೆ, ಸಮವಸ್ತ್ರ ಭತ್ತೆ ಮತ್ತು ವಿಶೇಷ ಭತ್ತೆಗಳ ದರಗಳಲ್ಲಿ ಹೆಚ್ಚಳ ಮಾಡಲು ಶಿಫಾರಸು ಮಾಡಲಾಗಿದೆ. ವಿಕಲಚೇತನ ನೌಕರರು ಯಾಂತ್ರಿಕೃತ ಮತ್ತು ಮೋಟಾರು ಚಾಲಿತ ವಾಹನ ಖರೀದಿಸಲು ಪ್ರಸ್ತುತ ಇರುವ ಸಹಾಯ ಧನವನ್ನು 25 ಸಾವಿರ ರೂ.ನಿಂದ 45ಸಾವಿರ ರೂ.ಗೆ ಹೆಚ್ಚಿಸಬೇಕು. ನೌಕರರ ವಿಕಲಚೇತನ ಮಕ್ಕಳಿಗೆ ಪ್ರತಿ ತಿಂಗಳು ನೀಡುತ್ತಿರುವ 500ರೂ.ಗಳ ಶೈಕ್ಷಣಿಕ ಭತ್ತೆ ದ್ವಿಗುಣಗೊಳಿಸಲು ಶಿಫಾರಸು ಮಾಡಲಾಗಿದೆ.
ರಾಜ್ಯ ಸರಕಾರಕ್ಕೆ ಮಂಜೂರಾಗಿರುವ 7.73ಲಕ್ಷ ಹುದ್ದೆಗಳ ಪೈಕಿ 5.20ಲಕ್ಷ ನೌಕರರು ಮಾತ್ರ ಕೆಲಸ ಮಾಡುತ್ತಿದ್ದು, ಶೇ.33ರಷ್ಟು ಹುದ್ದೆಗಳು ಖಾಲಿ ಇವೆ. ಹೊಸ ತಂತ್ರಜ್ಞಾನ ಮತ್ತು ಪ್ರಕ್ರಿಯೆಗಳನ್ನು ಕೆಲಸದಲ್ಲಿ ಅಳವಡಿಸಿಕೊಳ್ಳುವುದನ್ನು ಗಮನದಲ್ಲಿಸಿರಿಸಿಕೊಂಡು ಎಲ್ಲ ಇಲಾಖೆಗಳ ಸಿಬ್ಬಂದಿಗಳ ಅವಶ್ಯಕತೆಯನ್ನು ಪುನರ್ ಪರಿಶೀಲಿಸಬೇಕು. ಅನಂತರ ಹೊಸ ಸಿಬ್ಬಂದಿ ಮಾದರಿ ರೂಪಿಸಿ ವಾಸ್ತವ ಸಿಬ್ಬಂದಿಗಳ ಸಂಖ್ಯೆಯನ್ನು ನಿರ್ಧರಿಸಬೇಕೆಂದು ಆಯೋಗ ಸಲಹೆ ನೀಡಿದೆ.
ಆರನೇ ವೇತನ ಆಯೋಗದ ಶಿಫಾರಸುಗಳು ಅಖಿಲ ಭಾರತ ಸೇವೆಯ ಅಧಿಕಾರಿಗಳು, ಸಕ್ರಿಯ ನ್ಯಾಯಾಂಗ ವೇತನ ಆಯೋಗದ ವ್ಯಾಪ್ತಿಗೆ ಒಳಪಡುವ ನ್ಯಾಯಾಂಗದ ಅಧಿಕಾರಿಗಳು, ಯುಜಿಸಿ/ಎಐಸಿಟಿಇ ವೇತನ ಪಡೆಯುತ್ತಿರುವ ಬೋಧಕ ಸಿಬ್ಬಂದಿ ವೇತನ ಪರಿಷ್ಕರಣೆ ಅನ್ವಯಿಸುವುದಿಲ್ಲ.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಆಯೋಗದ ಅಧ್ಯಕ್ಷ ಎಂ.ಆರ್. ಶ್ರೀನಿವಾಸಮೂರ್ತಿ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭ, ಸಿಎಂ ಪ್ರಧಾನ ಕಾರ್ಯದರ್ಶಿ ಎಲ್.ಎ.ಅತಿಕ್ ಸೇರಿದಂತೆ ಆಯೋಗದ ಸದಸ್ಯರು ಉಪಸ್ಥಿತರಿದ್ದರು.
‘ಸರಕಾರಿ ನೌಕರರ ವೇತನ ಪರಿಷ್ಕರಣೆ ಸಂಬಂಧ ಆರನೆ ವೇತನ ಆಯೋಗದ ತನ್ನ ವರದಿ ನೀಡಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಸಂಬಂಧ ಚರ್ಚೆ ಮಾಡಿ, ವಿಧಾನ ಮಂಡಲ ಅಧಿವೇಶನದ ಬಳಿಕ ವೇತನ ಹೆಚ್ಚಳ ಘೋಷಣೆ ಮಾಡಲಾಗುವುದು’
-ಸಿದ್ದರಾಮಯ್ಯ, ಮುಖ್ಯಮಂತ್ರಿ







