ಜಮ್ಮು-ಕಾಶ್ಮೀರ: ಸೇನೆಯ ಗುಂಡಿಗೆ ಮತ್ತೋರ್ವ ನಾಗರಿಕ ಬಲಿ
ಜಮ್ಮು ಕಾಶ್ಮೀರ ಮತ್ತೆ ಉದ್ವಿಗ್ನ

ಶ್ರೀನಗರ, ಜ. 31: ಕಳೆದ ವಾರ ದಕ್ಷಿಣ ಕಾಶ್ಮೀರದ ಶೋಪಿಯಾನ ಜಿಲ್ಲೆಯಲ್ಲಿ ಸೇನಾ ಪಡೆ ಯೋಧರು ಪ್ರತಿಭಟನಕಾರರ ಮೇಲೆ ಹಾರಿಸಿದ ಗುಂಡಿನಿಂದ ಗಾಯಗೊಂಡಿದ್ದ 23 ವರ್ಷದ ಯುವಕ ಶ್ರೀನಗರದ ಆಸ್ಪತ್ರೆಯಲ್ಲಿ ಬುಧವಾರ ಬೆಳಗ್ಗೆ ಮೃತಪಟ್ಟಿದ್ದಾನೆ. ಇದರೊಂದಿಗೆ ಈ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೇರಿದೆ.
ಗುಂಡಿನಿಂದ ತಲೆಗೆ ಗಾಯಗೊಂಡು ಗಂಭೀರ ಸ್ಥಿತಿಯಲ್ಲಿದ್ದ ನರ್ಪೋರಾ ಗ್ರಾಮದ ರಯೀಸ್ ಅಹ್ಮದ್ ಗನಾಯಿಯನ್ನು ಶ್ರೀನಗರದ ಶೇರ್ ಇ ಕಾಶ್ಮೀರ ವೈದ್ಯಕೀಯ ವಿಜ್ಞಾನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಯೀಸ್ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ. ಕಳೆದ ಶನಿವಾರ 20 ವರ್ಷದ ಸುಹೈಲ್ ಲೋನೆ ಹಾಗೂ ಜಾವೇದ್ ಭಟ್ ಮೃತಪಟ್ಟಿದ್ದರು.
ಗನಾಯಿ ಸಾವಿನಿಂದ ಕಾಶ್ಮೀರದಲ್ಲಿ ಕಳೆದ ಒಂದು ತಿಂಗಳಲ್ಲಿ ಸಂಭವಿಸಿದ ಗಲಭೆ ಸಂಬಂಧಿಸಿದ ಘಟನೆಗಳಲ್ಲಿ ಮೃತಪಟ್ಟವರ ಸಂಖ್ಯೆ ಐದಕ್ಕೇರಿದೆ.
ಕಾಶ್ಮೀರ ಮತ್ತೆ ಉದ್ವಿಗ್ನ
ರಯೀಸ್ ಅಹ್ಮದ್ ಸಾವಿನ ಬಳಿಕ ದಕ್ಷಿಣ ಕಾಶ್ಮೀರದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ‘‘ಪರಿಸ್ಥಿತಿ ಕ್ರಮೇಣ ಸುಧಾರಿಸುತ್ತಿದೆ. ನಾವು ಪರಿಸ್ಥಿತಿಯನ್ನು ಗಮನಿಸುತ್ತಿದ್ದೇವೆ. ಯುವಕನ ಅಂತ್ಯ ಕ್ರಿಯೆ ಇಂದು ನಡೆಯಲಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ’’ ಎಂದು ಶೋಪಿಯಾನದ ಪೊಲೀಸ್ ಅಧೀಕ್ಷಕ ಅಂಬಾರ್ಕರ್ ಶ್ರೀರಾಮ್ ದಿನಕರ್ ಹೇಳಿದ್ದಾರೆ.
ವದಂತಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಶೋಪಿಯಾನ ಹಾಗೂ ಪುಲ್ವಾಮ ಜಿಲ್ಲೆಯಲ್ಲಿ ಅಂತರ್ಜಾಲ ಸಂಪರ್ಕ ಕಡಿತಗೊಳಿಸಲಾಗಿದೆ. ಶೋಪಿಯಾನ ಘಟನೆಯ ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ತಲುಪಿಸಲಾಗುವುದು ಎಂದು ಮುಖ್ಯಮಂತ್ರಿ ಮಹಬೂಬಾ ಮುಫ್ತಿ ಶಪಥ ಮಾಡಿದ ಬಳಿಕ ಬಿಜೆಪಿ-ಪಿಡಿಪಿ ಮೈತ್ರಿ ಸರಕಾರದ ನಡುವೆ ಬಿರುಕು ಮೂಡಿದೆ.
ಎಫ್ಐಆರ್ ದಾಖಲಿಸಿದ ಸೇನೆ ಘಟನೆಗೆ ಸಂಬಂಧಿಸಿ ಸೇನೆ ಕೂಡ ಎಫ್ಐಆರ್ ದಾಖಲಿಸಿದೆ. ಜಮ್ಮು ಹಾಗೂ ಕಾಶ್ಮೀರ ಪೊಲೀಸರು ಸೇನಾ ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲಿಸಿರುವುದನ್ನು ಹಿಂದೆಗೆಯುವಂತೆ ಆಗ್ರಹ ಕೇಳ ಬಂದ ನಡುವೆ ಭದ್ರತಾ ಪಡೆ ಕೂಡ ಎಫ್ಐಆರ್ ದಾಖಲಿಸಿದೆ.