ಬ್ರಹ್ಮಾವರ: ಜೇನುಕೃಷಿ ತರಬೇತಿ ಕಾರ್ಯಕ್ರಮ

ಉಡುಪಿ, ಜ.31: ಜೇನು ಸಾಕಾಣಿಕೆ ಮಾಡಲು ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಇರುವ ಗಿಡಗಳು ಯಾವಾಗ ಹೂ ಬಿಡುತ್ತವೆ. ಜೇನಿಗೆ ಬೇಕಾದ ಮಕರಂದ ಹೂವಿನಲ್ಲಿ ಇದೆಯೇ ಎಂಬುದನ್ನು ತಿಳಿದುಕೊಳ್ಳುವುದು ಅತಿ ಮುಖ್ಯ ಅಂಶ ಎಂದು ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ಹಾಗೂ ಸಹ ವಿಸ್ತರಣಾ ನಿರ್ದೇಶಕ ಡಾ.ಎಸ್.ಯು.ಪಾಟೀಲ್ ಹೇಳಿದ್ದಾರೆ.
ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹತ್ತು ದಿನಗಳ ಕಾಲ ಹಮ್ಮಿಕೊಳ್ಳಲಾದ ಜೇನು ಕೃಷಿಯಲ್ಲಿ ಅಲ್ಪಾವಧಿ ಪ್ರಮಾಣ ಪತ್ರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತಿದ್ದರು. ಜೇನು ಕೃಷಿಕರಿಗೆ ಜೇನು ಸಾಕಾಣಿಕೆಯಲ್ಲಿ ಮಾನಸಿಕ ಸ್ಥೈರ್ಯ ನೀಡುವುದೇ ಈ ತರಬೇತಿ ಉದ್ಧೇಶವಾಗಿದೆ ಎಂದವರು ತಿಳಿಸಿದರು.
ಮುಖ್ಯವಾಗಿ ಪರಾಗ ಮತ್ತು ಮಕರಂದ ಇದ್ಧರೆ ಮಾತ್ರ ಜೇನು ಸಾಕಲು ಅನುಕೂಲ. ಇದನ್ನು ಜೇನು ಕೃಷಿಕರು ತಿಳಿದರೆ ಮಾತ್ರ ಜೇನು ಸಾಕಲು ಸುಲಭ ವಾಗುತ್ತದೆ. ಜೇನು ಪೆಟ್ಟಿಗೆಯಲ್ಲಿ ಮೊದಲು ಜೇನನ್ನು ವೀಕ್ಷಿಸಬೇಕು. ರಾಣಿಜೇನು ಇದೆಯೇ ಇಲ್ಲವೋ, ಕೆಲಸಗಾರ ಜೇನು ಕೆಲಸ ಮಾಡುತ್ತಿದೆಯೋ ಇಲ್ಲವೋ ಎಂಬುದನ್ನು 10 ದಿನಗಳ ತರಬೇತಿಯಲ್ಲಿ ತಿಳಿದುಕೊಳ್ಳಬಹುದು ಎಂದು ಡಾ.ಪಾಟೀಲ್ ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಲಯ ಕೃಷಿ ತೋಟಗಾರಿಕಾ ಸಂಶೋಧನಾ ಕೇಂದ್ರದ ಹಿರಿಯ ಕ್ಷೇತ್ರ ಅಧೀಕ್ಷಕ ಡಾ. ಶಂಕರ್ ಎಂ. ಮಾತನಾಡಿ, ಜೇನು ಕುಟುಂಬ ಎಂಬುದು ಒಂದು ಅದ್ಭುತವಾದ ಕುಟುಂಬ ವಾಗಿದೆ. ಜೇನುತುಪ್ಪದಲ್ಲಿ ಕಾರ್ಬೋಹೈರ್ಡೆಡ್, ಪೈಬರ್, ವಿಟಮಿನ್-ಸಿ ಪೋಷಕಾಂಶಗಳು ಹೆಚ್ಚಾಗಿರುತ್ತವೆ. ಅಲ್ಲದೆ ಸಾಕಷ್ಟು ಕಾಯಿಲೆಗಳಿಗೆ ಜೇನಿನ ತುಪ್ಪವ್ನುಹೆಚ್ಚಾಗಿ ಬಳಸುತ್ತಾರೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾರ್ಕಳದ ಪ್ರಗತಿಪರ ಜೇನು ಕೃಷಿಕ ರಾದ ಲಕ್ಷ್ಮಣ್ ತರಬೇತಿಯ ವೇಳೆ ತಿಳಿದುಕೊಳ್ಳಬೇಕಾದ ಅಂಶಗಳ ಕುರಿತು ವಿವರಿಸಿದರು. ಕಾರ್ಯಕ್ರಮದಲ್ಲಿ ಕೆವಿಕೆಯ ಹಿರಿಯ ವಿಜ್ಞಾನಿ ಡಾ.ಧನಂಬಯ ಬಿ. ಉಪಸ್ಥಿತರಿದ್ದರು. ಕುಮಾರ್ ಬಿ.ಬಿ. ಸ್ವಾಗತಿಸಿ, ಸಿದ್ದರೂಡ ಪಡೆಪ್ಪಗೋಳ ವಂದಿಸಿದರು. ಡಾ. ಜಯಪ್ರಕಾಶ್ ಆರ್. ಕಾರ್ಯಕ್ರಮ ನಿರೂಪಿಸಿದರು.







