ಕಳಸಾ ಬಂಡೂರಿ ಬಗ್ಗೆ ತುಟಿಬಿಚ್ಚದ ಪ್ರಧಾನಿ ಮೋದಿ ವಿರುದ್ಧ ಅಹೋರಾತ್ರಿ ಧರಣಿ : ಪ್ರೊ.ಚಂಪಾ
"ಕಂಡದ್ದಕ್ಕೆಲ್ಲ ಬಂದ್ ಕರೆ ಸರಿಯಲ್ಲ"

ಬೆಂಗಳೂರು, ಜ. 31: ಮಹಾದಾಯಿ ವಿವಾದ ಬಗೆಹರಿಸುವ ಸಂಬಂಧ ತುಟಿಬಿಚ್ಚದ ಪ್ರಧಾನಿ ನರೇಂದ್ರ ಮೋದಿಯವರ ಕ್ರಮವನ್ನು ಖಂಡಿಸಿ ಜ.1ರಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಜನಸಾಮಾನ್ಯರ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ, ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ್ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾದಾಯಿ ವಿವಾದ ಇತ್ಯರ್ಥಕ್ಕೆ ಮಧ್ಯಪ್ರವೇಶಿಸಬೇಕೆಂದು ಫೆ.4ಕ್ಕೆ ಕನ್ನಡ ಪರ ಸಂಘಟನೆಗಳು ಕರೆ ನೀಡುವ ‘ಬೆಂಗಳೂರು ಬಂದ್’ಗೆ ನಮ್ಮ ಬೆಂಬಲವಿಲ್ಲ. ಮೌನವಾಗಿದ್ದೇ ಪ್ರತಿಭಟನೆ ಮಾಡಲು ಸಾಧ್ಯವಿದೆ ಎಂದು ಹೇಳಿದರು.
ವಿವಿಧ ರೀತಿಯಲ್ಲಿ ಪ್ರತಿಭಟನೆ ಮಾಡಲು ಅವಕಾಶವಿದೆ. ಆದರೆ, ಅದನ್ನು ಬಿಟ್ಟು ಕಂಡದ್ದಕ್ಕೆಲ್ಲಾ ಬಂದ್ ಕರೆ ನೀಡುವುದು ಸರಿಯಲ್ಲ ಎಂದು ಆಕ್ಷೇಪಿಸಿದ ಚಂಪಾ, ಇಲ್ಲಿನ ಸ್ವಾತಂತ್ರ ಉದ್ಯಾನವನದಲ್ಲಿ ನಡೆಯಲಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ತಾನೂ ಪಾಲ್ಗೊಳ್ಳುವೆ ಎಂದು ಹೇಳಿದರು.
ಒಂದೇ ಅಲ್ಲ: ಕಳಸಾ ಬಂಡೂರಿ ನಾಲೆ ಹಾಗೂ ಮಹಾದಾಯಿ ಯೋಜನೆ ಎರಡೂ ಒಂದೇ ಎಂದು ಗೊಂದಲ ಹುಟ್ಟಿಸುವ ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿರುವ ರಾಜಕೀಯ ಪಕ್ಷಗಳು ಹಾಗೂ ಇದುವರೆಗೂ ಈ ವಿಷಯದ ಬಗ್ಗೆ ತುಟಿ ಬಿಚ್ಚದ ಪ್ರಧಾನಿ ಮೋದಿ ವಿರುದ್ದ ಫೆ.1ರಿಂದ ಅಹೋರಾತ್ರಿ ಧರಣಿ ನಡೆಸಲು ಜನಸಾಮಾನ್ಯರ ಪಕ್ಷ ಸಜ್ಜಾಗಿದೆ ಎಂದು ಪಕ್ಷದ ಅಧ್ಯಕ್ಷ ಡಾ.ಡಿ.ಅಯ್ಯಪ್ಪ ಹೇಳಿದರು.
ಕಳಸಾ ಬಂಡೂರಿ ನಾಲಾ ಯೋಜನೆ ಹಾಗೂ ಮಹಾದಾಯಿ ತಿರುವು ಯೋಜನೆ ಎರಡು ಭಿನ್ನ. ಒಂದೇ ಪ್ರದೇಶದಲ್ಲಿವೆ ಎನ್ನುವುದನ್ನು ಬಿಟ್ಟರೆ ಇಲ್ಲಿಯ ಯೋಜನೆಗೆ ಬಹಳಷ್ಟು ವ್ಯತ್ಯಾಸವಿದೆ. ಮಹಾದಾಯಿ ಯೋಜನೆ ನದಿಗೆ ಸಂಬಂಧಿಸಿದ್ದು ಹಾಗೂ ಕರ್ನಾಟಕ, ಗೋವಾ, ಮಹಾರಾಷ್ಟ್ರ ಮಧ್ಯೆ ನೀರು ಹಂಚಿಕೆಯ ಬಗ್ಗೆ ಇನ್ನುವರೆಗೂ ಯಾವುದೇ ತೀರ್ಮಾನ ಆಗಿಲ್ಲ. ಈ ಹಿನ್ನೆಲೆಯಲ್ಲಿ ಈ ವಿವಾದ ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ತಾರ್ಕಿಕ ಅಂತ್ಯ ಕಾಣಲು ಸಾಧ್ಯವಿಲ್ಲ.
ಆದರೆ, ಕಳಸಾ ಬಂಡೂರಿ ನಾಲೆಗಳು ನಮ್ಮ ರಾಜ್ಯದಲ್ಲಿವೆ. ಅಲ್ಲದೆ ಇವುಗಳನ್ನು ಉಪಯೋಗಿಸಿಕೊಳ್ಳುವ ಎಲ್ಲ ರೀತಿಯ ಹಕ್ಕುಗಳು ನಮ್ಮ ರಾಜ್ಯಕ್ಕಿದ್ದು ಯಾವುದೇ ಅನುಮತಿ ಪಡೆಯುವುದು ಅವಶ್ಯಕತೆ ಇರಲಿಲ್ಲ. ಆದರೆ, ಹಿಂದಿನಿ ಸರಕಾರಗಳು ನಾಲೆಗಳ ಕಾಮಗಾರಿಯನ್ನೂ ನ್ಯಾಯಾಧೀಕರಣದ ಪರಿಧಿಯಲ್ಲಿ ಸೇರಿಸುವ ಮೂಲಕ ರಾಜ್ಯದ ಮೂಲಭೂತ ಹಕ್ಕಿಗೆ ಧಕ್ಕೆಯನ್ನುಂಟು ಮಾಡಿವೆ ಎಂದು ದೂರಿದರು.
ಕಳಸಾ ಬಂಡೂರಿ ನಾಲೆಗಳ ಕಾಮಗಾರಿಯನ್ನು ಪ್ರಾರಂಭಿಸಲು ರಾಜ್ಯಕ್ಕೆ ಬೇಕಾಗಿರುವುದು ಕೇವಲ ಪ್ರಧಾನಿ ಅಥವಾ ಕೇಂದ್ರ ಸರಕಾರದ ನಿರಪೇಕ್ಷಣ ಪತ್ರ ಮಾತ್ರ. ಈ ಹಿನ್ನೆಲೆಯಲ್ಲಿ 2018ರ ಜ.22ಕ್ಕೆ ಪ್ರಧಾನಿ ಕಚೇರಿಗೆ ನಿರಪೇಕ್ಷಣಾ ಪತ್ರವನ್ನು ನೀಡುವಂತೆ ಮನವಿಯನ್ನು ಪಕ್ಷ ನೀಡಿದೆ. ಅಲ್ಲದೆ, ಪ್ರಧಾನಿಗಳಿಗೆ ಎಲ್ಲ ರೀತಿಯಲ್ಲೂ ತಲುಪುವ ಪ್ರಯತ್ನ ಮಾಡಲಾಗಿದೆ. ಆದರೆ, ಸಣ್ಣ-ಸಣ್ಣ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಧಾನಿ ಒಂದು ರಾಜ್ಯದ ಜ್ವಲಂತ ಸಮಸ್ಯೆಗೆ ಪರಿಹಾರದ ಬಗ್ಗೆ ತುಟಿ ಬಿಚ್ಚದೇ ಇರುವ ಮೂಲಕ ತಾರತಮ್ಯ ವಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಳಸಾ ಬಂಡೂರಿಯ ವಿಷಯವಾಗಿ ಪ್ರಧಾನಿ ಮಧ್ಯಪ್ರವೇಶಿಸಿ ನ್ಯಾಯಾಧಿಕರಣದ ಪರಿಧಿಯಿಂದ ಹೊರಗೆ ಇತ್ಯರ್ಥಕ್ಕೆ ಮುಂದಾಗಬೇಕಾಗಿದೆ. ಅಲ್ಲದೆ, ಈ ಪ್ರತಿಭಟನೆ ನಿರಪೇಕ್ಷಣಾ ಪತ್ರ ದೊರೆಯುವವರೆಗೂ ಮುಂದುವರೆಯಲಿದೆ. ಪ್ರಧಾನಿ ಮೋದಿಯವರೇ ‘ರಾಜಕೀಯ ಬಿಡಿ, ನೀರು ಕೊಡಿ’ ಇಲ್ಲದಿದ್ದಲ್ಲಿ ರಾಜ್ಯಕ್ಕೆ ಬರುವುದು ಅವಶ್ಯಕತೆ ಇಲ್ಲ ಎಂದು ಅಯ್ಯಪ್ಪ ಆಕ್ರೋಶ ವ್ಯಕ್ತಪಡಿಸಿದರು.







