ಕಾಸ್‌ಗಂಜ್ ಹಿಂಸಾಚಾರ: ಪ್ರಮುಖ ಆರೋಪಿಯ ಬಂಧನ

ಬರೇಲಿ, ಜ.31: ಉತ್ತರ ಪ್ರದೇಶದ ಕಾಸ್‌ಗಂಜ್‌ನಲ್ಲಿ ಗಣರಾಜ್ಯೋತ್ಸವದ ದಿನದಂದು ನಡೆದ ಅಭಿಷೇಕ್ ಗುಪ್ತಾ ಅಲಿಯಾಸ್ ಚಂದನ್ ಗುಪ್ತಾ ಹತ್ಯೆಗೆ ಸಂಬಂಧಪಟ್ಟಂತೆ ಪೊಲೀಸರು ಬುಧವಾರ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ಸಲೀಮ್ ಜಾವೇದ್ ಎಂದು ಗುರುತಿಸಲಾಗಿದೆ. ಸಲೀಮ್ ಸೇರಿದಂತೆ ಆತನ ಸಹೋದರರಾದ ವಾಸೀಮ್ ಮತ್ತು ನಸೀಮ್ ಹಾಗೂ ಇತರ ಹದಿನೇಳು ಮಂದಿಯನ್ನು ಕೊಲೆ ಹಾಗೂ ಭಾರತೀಯ ದಂಡಸಂಹಿತೆಯ ಇತರ ಸೆಕ್ಷನ್‌ಗಳಡಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯ ಪೊಲೀಸರ ತಂಡವು ಸಲೀಮ್‌ನನ್ನು ಬಂಧಿಸಿದ್ದು, ಇತರ ಆರೋಪಿಗಳಿಗಾಗಿ ಶೋಧಕಾರ್ಯ ಮುಂದುವರಿದಿದೆ ಮತ್ತು ಅವರನ್ನು ಕೂಡಾ ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ (ಆಗ್ರಾ) ಅಜಯ್ ಆನಂದ್ ತಿಳಿಸಿದ್ದಾರೆ.
ಘಟನೆಯ ನಂತರ ಸಲೀಮ್ ತಲೆಮರೆಸಿಕೊಂಡಿದ್ದ. ಶನಿವಾರ ರಾತ್ರಿ ಆತನ ನಿವಾಸದ ಮೇಲೆ ದಾಳಿ ನಡೆಸಿದ ಪೊಲೀಸರು ಪಿಸ್ತೂಲು ಮತ್ತು ಕಚ್ಚಾ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದರು. ಗಣರಾಜ್ಯೋತ್ಸವ ದಿನದಂದು ಬೈಕ್ ರ್ಯಾಲಿಗೆ ಸಂಬಂಧಪಟ್ಟಂತೆ ಎರಡು ಸಮುದಾಯಗಳ ಮಧ್ಯೆ ಉಂಟಾದ ಘರ್ಷಣೆಯ ವೇಳೆ ಚಂದನ್ ಗುಪ್ತಾ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಈ ಬಗ್ಗೆ ಗುಪ್ತಾರ ತಂದೆ ಕೋತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.