ರೊಹಿಂಗ್ಯಾಗಳ ಭಾರತ ಪ್ರವೇಶಕ್ಕೆ ತಡೆ: ಕೇಂದ್ರದ ಉತ್ತರ ಕೇಳಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ,ಜ.31: ಮ್ಯಾನ್ಮಾರ್‌ನ ರೊಹಿಂಗ್ಯಾ ನಿರಾಶ್ರಿತರು ಭಾರತವನ್ನು ಪ್ರವೇಶಿಸು ವುದನ್ನು ಗಡಿ ರಕ್ಷಣಾ ಪಡೆ(ಬಿಎಸ್‌ಎಫ್)ಯು ತಡೆಯುತ್ತಿದೆ ಎಂದು ದೂರಿ ಸಲ್ಲಿಸಲಾಗಿ ರುವ ಅರ್ಜಿಗೆ ಉತ್ತರಿಸುವಂತೆ ಸರ್ವೋಚ್ಚ ನ್ಯಾಯಾಲಯವು ಬುಧವಾರ ಕೇಂದ್ರಕ್ಕೆ ಸೂಚಿಸಿದೆ.
ಬಿಎಸ್‌ಎಫ್ ರೊಹಿಂಗ್ಯಾಗಳ ಮೇಲೆ ಮೆಣಸಿನ ಹುಡಿಯನ್ನು ಎರಚುವ ಮೂಲಕ ಅವರು ಮ್ಯಾನ್ಮಾರ್ ಗಡಿ ದಾಟುವುದನ್ನು ತಡೆಯುತ್ತಿದೆ ಎಂಬ ನ್ಯಾಯವಾದಿ ಪ್ರಶಾಂತ್ ಭೂಷಣ ಅವರ ದೂರನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ನ್ಯಾಯಮೂರ್ತಿಗಳಾದ ಎ.ಎಂ.ಖನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ ಅವರನ್ನೊಳ ಗೊಂಡ ಪೀಠವು ಈ ನಿರ್ದೇಶವನ್ನು ನೀಡಿತು.
ಕೇಂದ್ರದ ಪರವಾಗಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು, ರೊಹಿಂಗ್ಯಾಗಳ ವಿಷಯವು ಸಾಂವಿಧಾನಿಕ ಅಧಿಕಾರವನ್ನು ಹೊಂದಿರುವ ಕಾರ್ಯಾಂಗದ ಬಳಿಯಿರುವುವದರಿಂದ ಮತ್ತು ಪರಿಸ್ಥಿತಿಯನ್ನು ನಿಭಾಯಿಸಲು ರಾಜತಾಂತ್ರಿಕ ಪ್ರಕ್ರಿಯೆಗಳು ಪ್ರಗತಿಯಲ್ಲಿರುವುದರಿಂದ ನ್ಯಾಯಾಂಗವು ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡಬಾರದು ಎಂದು ನ್ಯಾಯಾಲಯವನ್ನು ಆಗ್ರಹಿಸಿದರು.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಪರವಾಗಿ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಗೋಪಾಲ ಸುಬ್ರಮಣಿಯಂ ಅವರು, ಮೆಹ್ತಾ ಅವರ ವಾದವನ್ನು ತಾನು ಒಪ್ಪುತ್ತೇನೆ ಮತ್ತು ಭಾರತದಲ್ಲಿರುವ ರೋಹಿಂಗ್ಯಾಗಳ ಬಗ್ಗೆ ಮಾತ್ರ ಆಯೋಗವು ಕಳವಳವನ್ನು ಹೊಂದಿದೆ ಎಂದು ತಿಳಿಸಿದರು.







