ಬಿಜೆಪಿ ಯುವಕರ ದಾರಿ ತಪ್ಪಿಸುತ್ತಿದೆ: ಬಸನಗೌಡ
ಉಡುಪಿ: ಯುವ ಕಾಂಗ್ರೆಸ್ ನಾಯಕತ್ವ ತರಬೇತಿ

ಉಡುಪಿ, ಜ.31: ರಾಜ್ಯದಲ್ಲಿ ಅದರಲ್ಲೂ ಮುಖ್ಯವಾಗಿ ಕರಾವಳಿ ಭಾಗದಲ್ಲಿ ಬಿಜೆಪಿ ಪಕ್ಷ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ. ಕೋಮು ಗಲಭೆಗಳ ಮೂಲಕ ಹಿಂದುಳಿದ ಯುವಕರ ದಾರಿ ತಪ್ಪಿಸುತ್ತಿದೆ. ಇದಕ್ಕೆ ತಕ್ಕ ಪಾಠವನ್ನು ಯುವ ಕಾಂಗ್ರೆಸ್ ಕಲಿಸಲಿದೆ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ರಾಜ್ಯಾಧ್ಯಕ್ಷ ಬಸನಗೌಡ ಬದ್ರಳ್ಳಿ ಹೇಳಿದ್ದಾರೆ.
ನಗರದ ಹೊಟೇಲ್ ಕಿದಿಯೂರಿನ ಶೇಷಶಯನ ಸಭಾಂಗಣದಲ್ಲಿ ಬುಧವಾರ ಯುವ ಕಾಂಗ್ರೆಸ್ ನೇತೃತ್ವದಲ್ಲಿ ನಡೆದ ‘ಯುವ ದೃಷ್ಟಿ’ ಮಂಗಳೂರು ವಲಯ ಮಟ್ಟದ ಯುವ ಕಾಂಗ್ರೆಸ್ ನಾಯಕತ್ವ ಅಭಿವೃದ್ಧಿ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸಂಘಪರಿವಾರ ಮತ್ತು ಅದರ ಅಂಗಪಕ್ಷಗಳನ್ನು ಸಮರ್ಥವಾಗಿ ಎದುರಿಸಲು ಯುವ ಕಾಂಗ್ರೆಸ್ ಸಜ್ಜುಗೊಂಡಿದೆ. ಮಂಗಳೂರು ಚಲೋ ಮೊದಲಾದ ಕಾರ್ಯಕ್ರಮದ ಬದಲು ಉದ್ಯೋಗಕ್ಕಾಗಿ ಚಲೋ ಕಾರ್ಯಕ್ರಮವನ್ನು ಬಿಜೆಪಿ ಮಾಡಲಿ. ಸಮಾಜದಲ್ಲಿ ವಿಷ ಬೀಜವನ್ನು ಬಿತ್ತುವ ಕಾರ್ಯವನ್ನು ಬಿಜೆಪಿ ನಾಯಕರು ಮಾಡುತಿದ್ದಾರೆ. ಇತ್ತೀಚಿನ ಕೆಲ ದಿನಗಳಲ್ಲಿ ಬಿಜೆಪಿಯ ಕೆಲ ನಾಯಕರು ನಾಲಗೆಯನ್ನು ಎಲ್ಲೆಂದರಲ್ಲಿ ಹರಿಯಬಿಡುತಿದ್ದಾರೆ. ಇದಕ್ಕೆ ತಕ್ಕ ಪಾಠವನ್ನು ಯುವಕಾಂಗ್ರೆಸ್ ಕಲಿಸಲಿದೆ ಎಂದು ಬಸನಗೌಡ ಹೇಳಿದರು.
ಯುವಕರಿಗೆ ಜವಾಬ್ದಾರಿ: ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ ಮಾತನಾಡಿ, ಯುವಕರು ದೇಶದ ಶಕ್ತಿ. ಅವರಿಂದ ದೇಶ ಬದಲಾಗಲು ಸಾಧ್ಯವಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಯುವಪಡೆ ದೇಶವನ್ನ ಬದಲಿಸುವ ಶಕ್ತಿಯನ್ನು ಹೊಂದಿದೆ. ಬಿಜೆಪಿ ಪಕ್ಷ ಜಾತಿ-ಧರ್ಮಗಳ ಹೆಸರಿನಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ ಎಂದರು.
ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿಗಳಾದ ರವೀಂದ್ರದಾಸ್, ಜೇಬಿ ಮಥರ್, ಕಾರ್ಯಾಗಾರದ ವಲಯ ಮುಖ್ಯಸ್ಥ ಉಮೇಶ್ ಬೋರೇಗೌಡ, ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ರಾಜೇಂದ್ರ ರಾಜಣ್ಣ, ಶಿವಕುಮಾರ್, ಯುವಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ವಿಶ್ವಾಸ್ ವಿ. ಅಮೀನ್, ದ.ಕ. ಜಿಲ್ಲಾಧ್ಯಕ್ಷ ಮಿಥುನ್ ರೈ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಬ್ದುಲ್ ಅಜೀಜ್ ಹೆಜಮಾಡಿ, ಸುಹೈಲ್ ಕಂದಕ್, ಅಭಿಷೇಕ್, ಚೈತನ್ಯ ರೆಡ್ಡಿ, ಯುವ ಕಾಂಗ್ರೆಸ್ ಕಾರ್ಯದರ್ಶಿ ಲಿಯಾಕತುಲ್ಲಾ ಖಾನ್, ಜಿಲ್ಲಾ ಯುವಕಾಂಗ್ರೆಸ್ ಮುಂದಾಳುಗಳಾದ ವ್ನಿೇಶ್ ಕಿಣಿ, ಹಬೀಬ್ ಅಲಿ, ಸುಜಯ ಪೂಜಾರಿ ಹಾಗೂ ವಿವಿಧ ಜಿಲ್ಲೆಗಳ ಯುವಕಾಂಗ್ರೆಸ್ ಜಿಲ್ಲಾಧ್ಯಕ್ಷರು ಉಪಸ್ಥಿತರಿದ್ದರು.
ಉಡುಪಿ, ದ.ಕ. ಜಿಲ್ಲೆ ಸಹಿತ ಉತ್ತರ ಕನ್ನಡ, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಯುವ ಕಾಂಗ್ರೆಸ್ ಪ್ರತಿನಿಧಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಹೊಸದಿಲ್ಲಿಯ ಜವಾಹರ್‌ಲಾಲ್ ನೆಹರು ನಾಯಕತ್ವ ತರಬೇತಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಿದರು.







