ಯೋಧರನ್ನು ಪ್ರಚೋದಿಸಿದ ನಂತರ ಗುಂಡಿನ ದಾಳಿ: ಸೇನಾ ಕಮಾಂಡರ್
ಶೋಪಿಯಾನ್ ಪ್ರಕರಣ

ಹೊಸದಿಲ್ಲಿ, ಜ.31: ಕಳೆದ ವಾರ ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಾಗರಿಕರ ಮೇಲೆ ಗುಂಡು ಹಾರಿಸಿದ ಪ್ರಕರಣದಲ್ಲಿ ಸೇನಾ ಯೋಧರನ್ನು ಪ್ರಚೋದಿಸಲಾಗಿತ್ತು ಎಂದು ಸೇನೆಯ ಉನ್ನತ ಕಮಾಂಡರ್ ಹೇಳಿಕೆ ನೀಡಿದ್ದಾರೆ.
ಶೋಪಿಯಾನ್‌ನಲ್ಲಿ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ನಾಗರಿಕರು ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿ ಸೇನಾಧಿಕಾರಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಲಿದ್ದಾರೆ ಎಂದು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಘೋಷಿಸಿದ್ದರು. ಬಳಿಕ ಪೊಲೀಸರು ಎಫ್‌ಐಆರ್‌ನಲ್ಲಿ ಸೇನೆಯ ಮೇಜರ್ ಹೆಸರನ್ನೂ ದಾಖಲಿಸಿದ್ದರು.
ಸರಕಾರ ಈ ಪ್ರಕರಣದಲ್ಲಿ ವೈಯಕ್ತಿಕವಾಗಿ ದೋಷಾರೋಪ ಸಲ್ಲಿಸಲು ಅವಸರ ಮಾಡಿದೆ ಎಂದು ತಾನು ಭಾವಿಸಿರುವುದಾಗಿ ಸೇನೆಯ ಉತ್ತರ ವಿಭಾಗದ ಕಮಾಂಡರ್ ಲೆ.ಜ. ದೇವ್‌ರಾಜ್ ಅನ್ಬು ತಿಳಿಸಿದ್ದು, ಪೊಲೀಸರ ತನಿಖೆಯಲ್ಲಿ ಪ್ರಕರಣದ ಸತ್ಯಾಸತ್ಯತೆ ಹೊರಬೀಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶನಿವಾರ ಕರ್ತವ್ಯ ನಿಮಿತ್ತ ಸೇನೆಯ ಸುಮಾರು 30 ಟ್ರಕ್‌ಗಳು ಸಾಗುತ್ತಿದ್ದು ಮಾರ್ಗಮಧ್ಯೆ ಕೆಲವು ಟ್ರಕ್‌ಗಳು ಉಳಿದವುಗಳಿಂದ ಪ್ರತ್ಯೇಕಗೊಂಡಿವೆ. ಈ ಮಧ್ಯೆ ಪ್ರತ್ಯೇಕಗೊಂಡು ಸಾಗುತ್ತಿದ್ದ ಟ್ರಕ್‌ಗಳತ್ತ ಶೋಫಿಯಾನ್‌ನಲ್ಲಿ ಪ್ರತಿಭಟನಾಕಾರರು ಕಲ್ಲೆಸೆದಿದ್ದಾರೆ. 200ಕ್ಕೂ ಹೆಚ್ಚು ಮಂದಿ ಕಲ್ಲೆಸೆತದಲ್ಲಿ ತೊಡಗಿದ್ದು ಇವರ ಮಧ್ಯೆ 10 ಯೋಧರು ಸಿಕ್ಕಿಹಾಕಿಕೊಂಡಿದ್ದರು. ಕಲ್ಲೆಸೆತದಿಂದ ಹಿರಿಯ ಯೋಧರೊಬ್ಬರ ತಲೆಗೆ ಏಟುಬಿದ್ದು ಅವರು ಪ್ರಜ್ಞೆತಪ್ಪಿ ಬಿದ್ದಾಗ ಅನಿವಾರ್ಯವಾಗಿ ಯೋಧರು ಗುಂಡು ಹಾರಿಸಿ ಉದ್ರಿಕ್ತ ಗುಂಪನ್ನು ಚದುರಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಅನ್ಬು ಹೇಳಿದ್ದಾರೆ.
ಇಂತಹ ಸಂದರ್ಭದಲ್ಲಿ ಸಾಮಾನ್ಯ ಎಫ್‌ಐಆರ್ ದಾಖಲಿಸಬೇಕು ಎಂದು ಹೇಳಿದ ಅವರು, ತಮ್ಮ ಬಳಿಯಿದ್ದ ಸರಕಾರದ ಸ್ವತ್ತನ್ನು ರಕ್ಷಿಸಿಕೊಳ್ಳಲು ಯೋಧರು ನಡೆಸಿದ ಪ್ರಯತ್ನ ಇದಾಗಿದೆ ಎಂದರು. ಯೋಧರನ್ನು ಪ್ರಚೋದಿಸಿದಾಗ ಅವರು ಪ್ರತಿಕ್ರಿಯೆ ನೀಡಿದ್ದಾರೆ ಎಂದ ಲೆಫ್ಟಿನೆಂಟ್ ಜನರಲ್, ಸೇನೆಯು ಈ ಪ್ರಕರಣದ ಪ್ರತ್ಯೇಕ ತನಿಖೆ ನಡೆಸಲಿದೆ ಎಂದು ತಿಳಿಸಿದ್ದಾರೆ.
ಈ ಮಧ್ಯೆ ಎಫ್‌ಐಆರ್ ದಾಖಲಿಸುವ ವಿಷಯದಲ್ಲಿ ಆಡಳಿತಾರೂಢ ಪಕ್ಷ ಪಿಡಿಪಿ ಹಾಗೂ ಮಿತ್ರಪಕ್ಷ ಬಿಜೆಪಿಯ ಮಧ್ಯೆ ಭಿನ್ನಾಭಿಪ್ರಾಯ ಮೂಡಿದೆ. ಸೇನಾಧಿಕಾರಿಯ ಹೆಸರನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವುದು ಸೇನೆಯ ನೈತಿಕ ಸ್ಥೈರ್ಯವನ್ನು ಕುಂದಿಸಲಿದೆ ಎಂದು ಬಿಜೆಪಿ ಹೇಳಿದೆ. ಮೇಜರ್ ಅವರ ಹೆಸರನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ ಮಾತ್ರಕ್ಕೆ ಅವರನ್ನು ಆರೋಪಿಯೆಂದು ಪರಿಗಣಿಸಲಾಗದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿರುವುದಾಗಿ ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ಮುಖಂಡ ನಿರ್ಮಲ್ ಕುಮಾರ್ ಸಿಂಗ್ ಹೇಳಿಕೆ ನೀಡಿದ್ದಾರೆ.
ಪೊಲೀಸರು ಸೇನಾಧಿಕಾರಿಗಳನ್ನು ತನಿಖೆ ಮಾಡಬಹುದು. ಆದರೆ ಸೇನಾಪಡೆಗಳ ವಿಶೇಷ ಅಧಿಕಾರ ಕಾಯ್ದೆಯ ಪ್ರಕಾರ, ಅವರ ವಿರುದ್ಧ ಕಾನೂನು ಕ್ರಮ ಜರಗಿಸಬೇಕಿದ್ದರೆ ಕೇಂದ್ರ ಸರಕಾರದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.