ಮೂಲ ಸೌಕರ್ಯ ಅಭಿವೃದ್ಧಿಗೆ ಬಿಎಸ್‌ಎಫ್, ಐಟಿಬಿಪಿಗೆ 370 ಕೋ. ರೂ. ಮಂಜೂರು

ಹೊಸದಿಲ್ಲಿ, ಜ. 31: ಭಾರತ-ಪಾಕ್ ಹಾಗೂ ಚೀನಾ-ಭಾರತ ಗಡಿಗುಂಟ ಮೂಲ ಸೌಕರ್ಯ ಅಭಿವೃದ್ಧಿಪಡಿಸಲು ಒತ್ತು ನೀಡಿರುವ ಕೇಂದ್ರ ಸರಕಾರ ಮುಂಚೂಣಿ ಪ್ರದೇಶದಲ್ಲಿ ಬಂಕರ್ ನಿರ್ಮಿಸಲು ಹಾಗೂ ವಿಶೇಷ ಹವಾಮಾನ ನಿಯಂತ್ರಣ ಗುಡಿಸಲುಗಳನ್ನು ನಿರ್ಮಿಸಲು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಹಾಗೂ ಇಂಡೊ ಟಿಬೆಟನ್ ಗಡಿ ಪೊಲೀಸ್ (ಐಟಿಬಿಪಿ)ಗೆ 370 ಕೋ. ರೂ. ಮಂಜೂರು ಮಾಡಿದೆ.
ಮೂಲ ಸೌಕರ್ಯ ಅಭಿವೃದ್ಧಿಪಡಿಸಲು ಐಟಿಬಿಪಿ ಹಾಗೂ ಬಿಎಸ್‌ಎಫ್‌ಗೆ ಗೃಹ ಸಚಿವಾಲಯ ಒಟ್ಟು 369.84 ಕೋಟಿ ರೂಪಾಯಿ ಬಿಡುಗಡೆ ವಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮೊತ್ತವನ್ನು ಭಾರತ-ಪಾಕ್ ಗಡಿಯಲ್ಲಿ ಬಿಎಸ್‌ಎಫ್‌ಗೆ ಗಡಿ ಹೊರ ಠಾಣೆ ಬಲಪಡಿಸುವುದು, ಹವಾಮಾನ ನಿಯಂತ್ರಣ ಗುಡಿಸಲುಗಳನ್ನು ನಿರ್ಮಿಸುವುದು, ಎರಡೂ ಪಡೆಗಳಿಗೆ ಅತ್ಯಗತ್ಯದ ಇತರ ಕೆಲಸ ಹೊರತುಪಡಿಸಿ ಐಟಿಬಿಪಿಗೆ ಹಿಮ ಸ್ಕೂಟರ್ ಹೊದಲು ವೆಚ್ಚವಾಗಲಿದೆ.
ಗಡಿ ಭದ್ರತಾ ಪಡೆ 4096.7 ಕಿ.ಮೀ. ಭಾರತ-ಬಾಂಗ್ಲಾದೇಶ ಗಡಿ ಹಾಗೂ 237.2 ಕಿ.ಮೀ. ಗಡಿ ನಿಯಂತ್ರಣಾ ರೇಖೆ ಸೇರಿದಂತೆ 2,526.86 ಕಿ.ಮೀ. ಭಾರತ ಪಾಕ್ ಗಡಿಯನ್ನು ಕಾಯುತ್ತದೆ.