ಕೊಲೆಗಳಿಗೆ ಪ್ರಧಾನಿ ಮೋದಿಯೇ ಕಾರಣ : ಪ್ರಕಾಶ್ ರೈ

ಬೆಂಗಳೂರು, ಜ.31:ದೇಶದಲ್ಲಿ 2014ರಿಂದ ಇದುವರೆಗೂ ನಡೆದ ಎಲ್ಲಾ ಕೊಲೆಗಳಿಗೆ ಪ್ರಧಾನಿ ನರೇಂದ್ರ ಮೋದಿ ನೇರ ಕಾರಣವಾಗಿದ್ದು, ಇದನ್ನು ಅವರು ಒಪ್ಪಿಕೊಳ್ಳಬೇಕು ಎಂದು ಬಹುಭಾಷಾ ನಟ ಪ್ರಕಾಶ್ ರೈ ಆರೋಪಿಸಿದ್ದಾರೆ.
ಬುಧವಾರ ನಗರದ ಬಸವನಗುಡಿ ನ್ಯಾಶನಲ್ ಕಾಲೇಜು ಮೈದಾನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ, ರೈತರ ಬೃಹತ್ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ, ಅದು ಪ್ರಾಯೋಜಿತ ಕೊಲೆಯಾಗಿದೆ. ಅದೇ ರೀತಿ, 2014ರಿಂದ ದೇಶದಲ್ಲಿ ನಡೆದ ಪ್ರತಿ ಕೊಲೆಗೂ ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣ. ಅವರು ರೈತರಿಗೆ ನೀಡಿದ ಭರವಸೆಗಳು ಹುಸಿಯಾಗಿವೆ ಎಂದರು.
ಎಲ್ಲ ರಾಜಕೀಯ ನಾಯಕರು, ಸುಳ್ಳು ಹೇಳಿಕೊಂಡು ಜನರಿಂದ ಮತ ಪಡೆಯುತ್ತಿದ್ದಾರೆ. ಬಳಿಕ ಕಾಮಗಾರಿ ಹೆಸರಿನಲ್ಲಿ ಹಣ ಮಾಡಿಕೊಳ್ಳುತ್ತಿದ್ದಾರೆ ವಿನಃ ಜನರಿಗೆ ಇದುವರೆಗೂ ಏನು ಮಾಡಿಲ್ಲ. ಇಂತಹ ನಾಯಕರನ್ನು ಮೊದಲು ಜೈಲಿಗೆ ಕಳುಹಿಸುವ ಕಾರ್ಯಕ್ರಮ ನಡೆಸಬೇಕಾಗಿದೆ ಎಂದು ಪ್ರಕಾಶ್ ರೈ ಹೇಳಿದರು.
ನಾನು ಕೇಳುವ ಪ್ರಶ್ನೆಗಳಿಗೆ ಉತ್ತರ ಬಂದಿಲ್ಲ, ಬದಲಾಗಿ ಪ್ರಶ್ನೆಗಳೇ ಹೆಚ್ಚಾಗಿವೆ ಎಂದ ಅವರು, ರೈತರ ಚಳವಳಿಯನ್ನು ರಾಜಕೀಯ ಲಾಭಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ನೈಜವಾಗಿ ಹೋರಾಟಕ್ಕೆ ಬೆಂಬಲ ನೀಡುವ ಸಂಖ್ಯೆ ಕಡಿಮೆಯಾಗುತ್ತಿದ್ದು, ಮೊದಲು ನಗರವಾಸಿಗಳು ರೈತರ ಬೆಂಬಲಕ್ಕೆ ನಿಲ್ಲಬೇಕು ಎಂದು ಅವರು ತಿಳಿಸಿದರು.
ರಾಜಕೀಯ ಬೇಡ
ನಾನು ಯಾವ ಪಕ್ಷಕ್ಕೂ ಸೇರಲ್ಲ, ಈ ರಾಜಕೀಯವೇ ಬೇಡ. ಆದರೆ, ಜನರ ಮಧ್ಯೆ ಇರಬೇಕು. ಹೀಗಾಗಿ, ನೊಂದ ಸಮುದಾಯಗಳ ಹೋರಾಟದಲ್ಲಿ ಸಕ್ರಿಯವಾಗಿರುತ್ತೇನೆ.
-ಪ್ರಕಾಶ್ ರೈ, ಬಹುಭಾಷಾ ನಟ







