ರಣಕಹಳೆ ಮೊಳಗಿಸಿ ಕಾಂಗ್ರೆಸ್ ಚುನಾವಣೆ ಪ್ರಚಾರಕ್ಕೆ ಚಾಲನೆ
ಕಾಂಗ್ರೆಸ್‌ನಿಂದ ಚುನಾವಣೆ ಪ್ರಚಾರಕ್ಕೆ ಸಕಲ ಸಿದ್ಧತೆ

ಬೆಂಗಳೂರು, ಜ.31: ಮುಂದಿನ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಸಕಲ ಸಿದ್ಧತೆಯಲ್ಲಿ ತೊಡಗಿದ್ದು, ಇಂದು ನಡೆದ ಕಾಂಗ್ರೆಸ್‌ನ ರಾಜ್ಯ ಪ್ರಚಾರ ಸಮಿತಿಯ ಮೊದಲ ಸಭೆಯನ್ನು ರಣ ಕಹಳೆ ಮೊಳಗಿಸುವ ಮೂಲಕ ಚಾಲನೆ ನೀಡಲಾಯಿತು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಎಐಸಿಸಿ ಮುಖಂಡರಾದ ಆಸ್ಕರ್ ಫರ್ನಾಂಡಿಸ್, ಬಿ.ಕೆ.ಹರಿಪ್ರಸಾದ್ ಹಾಗೂ ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಸೇರಿದಂತೆ ಹಲವು ಮುಖಂಡರು ಏಕ ಕಾಲದಲ್ಲಿ ಚುನಾವಣೆಯ ರಣ ಕಹಳೆ ಮೊಳಗಿಸಿದರು.
ರಾಜ್ಯ ಕಾಂಗ್ರೆಸ್ ಚುನಾವಣೆಯ ಪ್ರಚಾರ ತಂತ್ರಗಳು ಹೇಗಿರಬೇಕು, ಚುನಾವಣೆಯಲ್ಲಿ ಪ್ರಚಾರದ ವೈಖರಿ, ಪ್ರತಿಪಕ್ಷಗಳ ವಿರೋಧಿ ಪ್ರಚಾರಕ್ಕೆ ಪ್ರತಿಪ್ರಚಾರ ಹಾಗೂ ರಾಜ್ಯ ಸರಕಾರದ ಸಾಧನೆಗಳನ್ನು ಜನರಿಗೆ ಮುಟ್ಟಿಸಲು ಕೈಗೊಳ್ಳಬೇಕಾದ ಪರಿಣಾಮಕಾರಿ ಕಾರ್ಯಕ್ರಮಗಳ ಕುರಿತು ಇಂದು ನಡೆದ ಸಭೆಯಲ್ಲಿ ವಿಸ್ತೃತವಾಗಿ ಚರ್ಚೆಗಳು ನಡೆದಿವೆ.
ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಕಾಂಗ್ರೆಸ್ ಪ್ರಚಾರ ಸಮಿತಿಯ ಮೊದಲ ಸಭೆಯಲ್ಲಿ ಸಮಿತಿಯ ಬಹುತೇಕ ಸದಸ್ಯರು, ಜಿಲ್ಲಾಧ್ಯಕ್ಷರು ಪಾಲ್ಗೊಂಡಿದ್ದರು. ಇವರ ಜತೆಗೆ ಸಚಿವರುಗಳಾದ ರಾಮಲಿಂಗಾರೆಡ್ಡಿ, ರಮೇಶ್‌ಕುಮಾರ್, ಕೆ.ಜೆ.ಜಾರ್ಜ್, ಎಚ್.ಸಿ.ಮಹದೇವಪ್ಪ, ಕಾಗೋಡು ತಿಮ್ಮಪ್ಪ, ಟಿ.ಬಿ.ಜಯಚಂದ್ರ, ಎಚ್.ಆಂಜನೇಯ, ಪ್ರಿಯಾಂಕ್ ಖರ್ಗೆ, ಪ್ರಮೋದ್ ಮಧ್ವರಾಜ್, ತನ್ವೀರ್ ಸೇಠ್, ರಮಾನಾಥ್ ರೈ ಭಾಗವಹಿಸಿದ್ದರು.
ತಾರಾ ಮೆರಗು: ಕಾಂಗ್ರೆಸ್‌ನ ಚುನಾವಣಾ ಪ್ರಚಾರಕ್ಕೆ ಸಿನೆಮಾ ತಾರೆಯರ ದೊಡ್ಡ ಬಳಗವೆ ಇದೆ. ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ಹಾಗೂ ನಟಿ ರಮ್ಯಾ, ಪ್ರಚಾರ ಸಮಿತಿ ಸದಸ್ಯರುಗಳಾದ ನಟಿ ಮಾಲಾಶ್ರೀ, ಅಭಿನಯ, ಭಾವನಾ, ನಟ-ನಿರ್ದೇಶಕ ಸಾಧುಕೋಕಿಲ, ವಿಧಾನ ಪರಿಷತ್ ಸದಸ್ಯರುಗಳಾದ ಜಯಮಾಲಾ, ಮುಖ್ಯಮಂತ್ರಿ ಚಂದ್ರು ಸಭೆಯಲ್ಲಿ ಪಾಲ್ಗೊಂಡು ತಾರಾ ಮೆರಗು ನೀಡಿದರು. ಮಾಜಿ ಸಚಿವ ಅಂಬರೀಷ್ ಸಭೆಗೆ ಗೈರು ಹಾಜರಾಗಿದ್ದರು.
ನಾಯಕರಲ್ಲಿ ಲವಲವಿಕೆ: ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರಾಗಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್, ಸಭೆಯಲ್ಲಿ ಭಾಗವಹಿಸಿದ ಎಲ್ಲ ಮುಖಂಡರೊಂದಿಗೆ ಲವಲವಿಕೆಯಿಂದ ಮಾತನಾಡುತ್ತಿದ್ದರು. ಜೊತೆಗೆ ಎಲ್ಲ ಸದಸ್ಯರು ಪರಸ್ಪರ ಕುಶಲೋಪರಿ, ತಮ್ಮ ಕ್ಷೇತ್ರಗಳ ಚುನಾವಣೆಯ ಸ್ಥಿತಿಗತಿಗಳ ಕುರಿತು ಮಾತುಕತೆ ನಡೆಸುತ್ತಿದ್ದ ದೃಶ್ಯಗಳು ಕಂಡುಬಂದವು.







