ಹೆಚ್ಚಿನ ತೆರಿಗೆ ರಿಯಾಯಿತಿಯ ನಿರೀಕ್ಷೆಯಲ್ಲಿ ಚರ್ಮ ಕೈಗಾರಿಕೆ
ಬಜೆಟ್-2018

ಲಕ್ನೋ,ಜ.31: ರಾಜ್ಯಕ್ಕೆ ಆದಾಯ ಗಳಿಕೆಯಲ್ಲಿ ಪ್ರಮುಖ ಮೂಲಗಳಲ್ಲೊಂದಾಗಿರುವ ಚರ್ಮೋದ್ಯಮವು ಜಾಗತಿಕ ಮಾರುಕಟ್ಟೆಯಲ್ಲಿ ಪ್ರಾಬಲ್ಯವನ್ನು ಗಳಿಸಲು ಮತ್ತು ಭಾರತದ ಚರ್ಮ ಕೈಗಾರಿಕೆಗೆ ನೂತನ ಬೆದರಿಕೆಯಾಗಿರುವ ಬಾಂಗ್ಲಾದೇಶದ ಮಾರುಕಟ್ಟೆಯನ್ನು ಎದುರಿಸಲು ಮುಂಗಡಪತ್ರದಲ್ಲಿ ಹೆಚ್ಚಿನ ತೆರಿಗೆ ರಿಯಾಯಿತಿಗಳು ದೊರೆಯುವ ಆಶಯದಲ್ಲಿದೆ. ವಿತ್ತಸಚಿವ ಅರುಣ್ ಜೇಟ್ಲಿಯವರು ಗುರುವಾರ ಸಂಸತ್ತಿನಲ್ಲಿ 2018-19ನೇ ಸಾಲಿನ ಮುಂಗಡಪತ್ರವನ್ನು ಮಂಡಿಸಲಿದ್ದಾರೆ.
ವಿಶೇಷ ಆರ್ಥಿಕ ವಲಯಗಳನ್ನು ಸ್ಥಾಪಿಸಿರುವ ಬಾಂಗ್ಲಾದೇಶವು ಚರ್ಮ ಕೈಗಾರಿಕೋದ್ಯಮಿಗಳಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಜಾಗತಿಕ ಮಾರುಕಟ್ಟೆ ಯಲ್ಲಿ ಬೇಡಿಕೆಗಳನ್ನು ಗಳಿಸಿಕೊಳ್ಳುತ್ತಿದೆ. ಹೊಸ ಚರ್ಮೋದ್ಯಮ ಘಟಕಗಳಿಗೆ ಐದು ವರ್ಷಗಳ ಆದಾಯ ತೆರಿಗೆ ರಿಯಾಯಿತಿಯನ್ನು ಘೋಷಿಸಿರುವ ಅದು, ಆದಾಯ ತೆರಿಗೆಗೆ ವಿವಿಧ ಸ್ತರಗಳನ್ನು ನಿಗದಿಗೊಳಿಸಿದೆ. ಇವೆಲ್ಲಕ್ಕಿಂತ ಮಿಗಿಲಾಗಿ ಚರ್ಮೋದ್ಯಮ ಕ್ಷೇತ್ರದಲ್ಲಿ ಕಾರ್ಮಿಕ ಕಾನೂನುಗಳನ್ನು ಅದು ಸಡಿಲಿಸಿದೆ.
ಬಾಂಗ್ಲಾದೇಶ ಸರಕಾರದ ಈ ಕೊಡುಗೆಗಳು ದೇಶದಲ್ಲಿನ ಮತ್ತು ವಿದೇಶಗಳಲ್ಲಿಯ ಚರ್ಮೋದ್ಯಮಿಗಳನ್ನು ಆಕರ್ಷಿಸುತ್ತಿದೆ ಎಂದು ಚರ್ಮ ರಫ್ತು ಮಂಡಳಿಯ ಅಧ್ಯಕ್ಷ ಮುಖ್ತಾರುಲ್ ಅಮೀನ್ ಹೇಳಿದರು.
ಚರ್ಮೋದ್ಯಮಕ್ಕೆ ಸರಕಾರದಿಂದ 2,600 ಕೋ.ರೂ.ಗಳ ವಿಶೇಷ ಪ್ಯಾಕೇಜ್‌ನ್ನು ಪ್ರಶಂಸಿಸಿದ ಅವರು, ಬಾಂಗ್ಲಾದೇಶದಿಂದ ಪೈಪೋಟಿಯನ್ನು ಎದುರಿಸಲು ಇನ್ನಷ್ಟು ಉಪಕ್ರಮಗಳ ಅಗತ್ಯವಿದೆ ಎಂದರು.
ಸರಕಾರವು ಕಾಲ ನಿಗದಿತ ರೀತಿಯಲ್ಲಿ ಜಿಎಸ್‌ಟಿಯನ್ನು ಮರಳಿಸಬೇಕು ಎನ್ನುವುದು ಉದ್ಯಮದ ಆಗ್ರಹವಾಗಿದೆ. ಜಿಎಸ್‌ಟಿ ವ್ಯವಸ್ಥೆ ಜಾರಿಗೊಂಡಾಗಿನಿಂದಲೂ ಚರ್ಮೋದ್ಯಮಗಳಿಗೆ ಜಿಎಸ್‌ಟಿ ವಾಪಸ್ ಸಿಕ್ಕಿಲ್ಲ ಎಂದು ಅಮೀನ್ ತಿಳಿಸಿದರು.
ಕಾರ್ಮಿಕ ಕಾನೂನುಗಳಲ್ಲಿ ಸಡಿಲಿಕೆ ಮತ್ತು ಚರ್ಮ ಹದ ಮಾಡುವ ಘಟಕಗಳು ಹೊರಗುತ್ತಿಗೆ ನೀಡುತ್ತಿರುವ ಕೆಲಸಗಳ ಮೇಲಿನ ತೆರಿಗೆಯ ರದ್ದತಿ ಉದ್ಯಮದ ಬೇಡಿಕೆಗಳಲ್ಲಿ ಸೇರಿವೆ. ಜಾಗತಿಕ ಮಾರುಕಟ್ಟೆಯಲ್ಲಿ ತಮ್ಮ ಸರಕುಗಳಿಗೆ ಬ್ರಾಂಡ್ ಸೃಷ್ಟಿಸಿಕೊಳ್ಳಲು ಸರಕಾರವು ನೆರವಾಗಬೇಕು ಎಂದೂ ಚರ್ಮೋದ್ಯಮಿಗಳು ಬಯಸಿದ್ದಾರೆ.