ಖಾಯಮಾತಿಗೆ 12 ವರ್ಷಗಳಿಂದ ಕಾದಿರುವ 9 ಸರಕಾರಿ ನೌಕರರು
ಕೆಎಟಿ ಮೆಟ್ಟಲೇರಲು ಮಾನವ ಹಕ್ಕು ಪ್ರತಿಷ್ಠಾನ ನಿರ್ಧಾರ

ಉಡುಪಿ, ಜ.31: ರಾಜ್ಯ ಸರಕಾರದ ವಿವಿಧ ಇಲಾಖೆಗಳಿಗೆ ನೇಮಕಗೊಂಡು ಹತ್ತು ವರ್ಷಗಳಿಗೂ ಅಧಿಕ ಕಾಲ ತಡೆ ರಹಿತ ಸೇವೆ ಸಲ್ಲಿಸಿದ ದಿನಗೂಲಿ ನೌಕರರನ್ನು ಖಾಯಂಗೊಳಿಸಬೇಕು ಎಂಬ ಸುಪ್ರೀಂ ಕೋರ್ಟ್ ಆದೇಶ ನೀಡಿ 12 ವರ್ಷಗಳು ಕಳೆದರೂ ಅವಿಭಜಿತ ದಕ್ಷಿಣ ಕನ್ನಡದ 9 ಮಂದಿ ದಿನಗೂಲಿ ನೌಕರರನ್ನು ಸತತವಾಗಿ ಸತಾಯಿಸುತ್ತಿರುವ ದ.ಕ. ಜಿಲ್ಲಾಡಳಿತದ ವಿರುದ್ಧ ಕೆಎಟಿಯಲ್ಲಿ ದಾವೆ ಹೂಡಲು ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ನಿರ್ಧರಿಸಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ ಶ್ಯಾನುಬಾಗ್ ಈ ವಿಷಯ ತಿಳಿಸಿದರು. ಉಡುಪಿಯ ಸರಕಾರಿ ಹೆಣ್ಣು ಮಕ್ಕಳ ತರಬೇತಿ ಶಾಲೆಯಲ್ಲಿ 42 ವರ್ಷಗಳ ಕಾಲ ಕೇವಲ 15 ರೂ. ಮೂಲವೇತನದಲ್ಲಿ ದುಡಿದ ಅಕ್ಕು ಹಾಗೂ ಲೀಲಾ ಪ್ರಕರಣದಲ್ಲೂ ಸುಪ್ರೀಂ ಕೋರ್ಟು ಇವೇ ಶರ್ತಗಳ ಆಧಾರದಲ್ಲಿ ವೇತನ ನೀಡಲು ತೀರ್ಪು ನೀಡಿತ್ತು. ಸುಮಾರು 16 ವರ್ಷಗಳ ನ್ಯಾಯಾಂಗ ಹೋರಾಟದ ಬಳಿಕ ಅವರಿಬ್ಬರಿಗೂ ತಲಾ 27 ಲಕ್ಷ ರೂ. ಬಾಕಿ ವೇತನ ಹಾಗೂ ನಿವೃತ್ತಿ ಸೌಲಭ್ಯಗಳೂ ಸಿಕ್ಕಿದ್ದವು ಎಂದವರು ವಿವರಿಸಿದರು.
ಇದೀಗ ಅದೇ ಆದೇಶದ ಆಧಾರದಲ್ಲಿ ತಮಗೂ ಪೂರ್ಣ ವೇತನ ಹಾಗೂ ನಿವೃತ್ತಿ ಸೌಲಭ್ಯಗಳನ್ನು ನೀಡಬೇಕೆಂದು ಸುಮಾರು ಮೂರು ದಶಕಗಳಷ್ಟು ಕಾಲ ಸರಕಾರಿ ಸೇವೆ ಸಲ್ಲಿಸಿರುವ 9 ಮಂದಿ ದಿನಗೂಲಿ ನೌಕರರು ಆಗ್ರಹಿಸುತ್ತಿದ್ದಾರೆ. ಇವರಲ್ಲಿ ಎಂಟು ಮಂದಿ ಮಹಿಳೆಯರಾದರೆ, ಒಬ್ಬರು ಪುರುಷರು. ಎಂಟು ಮಂದಿ ದಕ್ಷಿಣ ಕನ್ನಡದಲ್ಲಿ ಉದ್ಯೋಗಿಗಳಾದರೆ, ಒಬ್ಬರು ಉಡುಪಿ ಜಿಲ್ಲೆಯಲ್ಲಿ ನೌಕರಿಯಲ್ಲಿದ್ದಾರೆ.
9 ಮಂದಿಯಲ್ಲಿ ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಬೆರಳಚ್ಚುಗಾರರಾಗಿ ದುಡಿದ ನಿರಂಜನ್ ಆಚಾರ್ಯರು ಈಗಾಗಲೇ ನಿವೃತ್ತಿ ಹೊಂದಿದ್ದರೆ, ಉಡುಪಿ ಜಿಲ್ಲೆಯ ಪಡುಬಿದ್ರಿ ಪಿಎಚ್‌ಸಿಯಲ್ಲಿ ದುಡಿಯುತ್ತಿರುವ ರಂಜನಿ, ಮುಂದಿನ ಮೇ ತಿಂಗಳಲ್ಲಿ ನಿವೃತ್ತರಾಗುತಿದ್ದಾರೆ. ಇನ್ನುಳಿದ ಗುಲಾಬಿ, ಸುಮತಿ ಬಾಯಿ, ವಿಜಯಕುಮಾರಿ, ಸತ್ಯಶಂಕರಿ, ಅನಿತಾ ಯೋಗಿನಿ ಹಾಗೂ ನೇತ್ರಾಕ್ಷಿ ಆಳ್ವ ಅವರು ಕಳೆದ ಮೂರು ದಶಕಗಳಿಂದ ದ.ಕ.ದ ವಿವಿಧ ಇಲಾಖೆಗಳಲ್ಲಿ ದಿನಗೂಲಿ ನೌಕರರಾಗಿ ದುಡಿಯುತಿದ್ದು, ನಿವೃತ್ತಿಯ ಅಂಚಿನಲ್ಲಿದ್ದಾರೆ ಎಂದು ಡಾ.ಶ್ಯಾನುಭಾಗ್ ತಿಳಿಸಿದರು.
ಕೋರ್ಟು ಆದೇಶದ ಉಲ್ಲಂಘನೆ: ನೌಕರರು ಸರಕಾರದಿಂದ ಮಂಜೂರಾದ ಹುದ್ದೆಗಳಲ್ಲಿ ನೇಮಕವಾಗಿರಬೇಕು, ಆವಶ್ಯವಿರುವ ವಿದ್ಯಾರ್ಹತೆ ಯನ್ನು ಹೊಂದಿರಬೇಕು ಹಾಗೂ ತಮ್ಮ ಹತ್ತು ವರ್ಷಗಳ ಸೇವಾವಧಿಯಲ್ಲಿ ಯಾವುದೇ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರಬಾರದು ಎಂಬ ನಾಲ್ಕು ಶರ್ತಗಳನ್ನು ನ್ಯಾಯಾಲಯ ವಿಧಿಸಿತ್ತು.
ನೌಕರರು ಸರಕಾರದಿಂದ ಮಂಜೂರಾದ ಹುದ್ದೆಗಳಲ್ಲಿ ನೇಮಕವಾಗಿರಬೇಕು, ಆವಶ್ಯವಿರುವ ವಿದ್ಯಾರ್ಹತೆ ಯನ್ನು ಹೊಂದಿರಬೇಕು ಹಾಗೂ ತಮ್ಮ ಹತ್ತು ವರ್ಷಗಳ ಸೇವಾವಧಿಯಲ್ಲಿ ಯಾವುದೇ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರಬಾರದು ಎಂಬ ನಾಲ್ಕು ಶರ್ತಗಳನ್ನು ನ್ಯಾಯಾಲಯ ವಿಧಿಸಿತ್ತು. ಕಳೆದ 12 ವರ್ಷಗಳಲ್ಲಿ ಕರ್ನಾಟಕ ಸರಕಾರದ ವಿವಿಧ ಇಲಾಖೆಗಳು ಈ ಮೇಲಿನ ನಾಲ್ಕೂ ಶರ್ತಗಳನ್ನು ಪೂರೈಸಿದ 248 ತಾತ್ಕಾಲಿಕ ನೌಕರರನ್ನು ಖಾಯಂಗೊಳಿಸಿದ ದಾಖಲೆಗಳನ್ನು ಪ್ರತಿಷ್ಠಾನ ಸಂಗ್ರಹಿಸಿದೆ. ಇವರಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ 184, ಯುವಜನ ಇಲಾಖೆಯ 28, ಜಿಪಂನ 4, ಅರಣ್ಯ ಇಲಾಖೆಯ 3 ಹಾಗೂ ಆರೋಗ್ಯ ಇಲಾಖೆಯ 16 ನೌಕರರು ಸೇರಿದ್ದಾರೆ. ಇವರೆಲ್ಲರ ಪೂರ್ವನಿದರ್ಶನದ ದಾಖಲೆಗಳನ್ನು ನೀಡಿದ್ದರೂ ದ.ಕ ಜಿಲ್ಲಾಡಳಿತ ಕ್ಕೆ ಇನ್ನೂ ಮನವರಿಕೆ ಆಗಿಲ್ಲ ಎಂದರು.
ಇವರೇನು ಪಾಪ ಮಾಡಿದ್ದಾರೆ?: 2006ರ ಎಪ್ಪಿಲ್ 10ರಂದು ದೇಶದ ಉಚ್ಛ ನ್ಯಾಯಾಲಯದ ಸಂವಿಧಾನ ಪೀಠ ನೀಡಿದ ಐತಿಹಾಸಿಕ ತೀರ್ಪಿನ ಕೆಲವೇ ದಿನಗಳಲ್ಲಿ ಕರ್ನಾಟಕ ಸರಕಾರದ ಅಂದಿನ ಮುಖ್ಯ ಕಾರ್ಯದರ್ಶಿ ಬಿ.ಕೆ.ದಾಸ್ ಅವರು ಸುತ್ತೋಲೆಯೊಂದನ್ನು ಹೊರಡಿಸಿ ಮಂಜೂರಾದ ಹುದ್ದೆಗಳಲ್ಲಿ ನೇಮಕವಾಗಿರುವ ನೌಕರರು ಆವಶ್ಯಕ ಅರ್ಹತೆಯನ್ನು ಹೊಂದಿದ್ದಲ್ಲಿ, ಅಂತವರು ಯಾವುದೇ ನ್ಯಾಯಾಲಯದ ತಡೆಯಾಜ್ಞೆಯ ಆಧಾರವಿಲ್ಲದೆ ಹತ್ತು ವರ್ಷಗಳ ಸೇವೆ ಸಲ್ಲಿಸಿದ್ದಲ್ಲಿ ಒಂದು ಬಾರಿಯ ಕ್ರಮವಾಗಿ ಅವರ ಸೇವೆಯನ್ನು ಸಕ್ರಮಗೊಳಿಸಬೇಕು ಎಂಬ ಸ್ಪಷ್ಟ ನಿರ್ದೇಶನವನ್ನು ನೀಡಿದ್ದರು. ಈ ಸುತ್ತೋಲೆಯ ಆಧಾರದಲ್ಲೇ ವಿವಿಧ ಇಲಾಖೆಗಳ 248 ಮಂದಿಯ ಸೇವೆಯನ್ನು ಖಾಯಂಗೊಳಿಸಲು ಸಾಧ್ಯವಾದಲ್ಲಿ ದ.ಕ ಜಿಲ್ಲೆಯ ಈ 9 ದಿನಗೂಲಿ ನೌಕರರು ಸೇವೆಯನ್ನು ಯಾಕೆ ಖಾಯಂ ಗೊಳಿಸುತ್ತಿಲ್ಲ. ಇವರು ಮಾಡಿರುವ ಅಪರಾಧವಾದರೂ ಏನು? ಎಂದು ಡಾ.ಶ್ಯಾನುಭಾಗ್ ಆಕ್ರೋಶದಿಂದ ಪ್ರಶ್ನಿಸಿದರು.
ಪ್ರತಿಷ್ಠಾನಕ್ಕೆ ದೂರು: ಕಳೆದ 12 ವರ್ಷಗಳಲ್ಲಿ ಜಿಲ್ಲಾಡಳಿತಕ್ಕೆ ಹಾಗೂ ಮೇಲಾಧಿಕಾರಿಗಳಿಗೆ ನೀಡಿದ ಹಲವಾರು ಅರ್ಜಿ, ಮನವಿಗಳು ವಿಫಲವಾದ ಹಿನ್ನೆಲೆಯಲ್ಲಿ ಈ ನೌಕರರೆಲ್ಲ 2014ರಲ್ಲಿ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನವನ್ನು ಆಶ್ರಯಿಸಿದರು. ಈ ಕುರಿತು ಚರ್ಚಿಸಲು ಆಗಿನ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ಪ್ರತಿಷ್ಠಾನದ ಪದಾಧಿಕಾರಿಗಳನ್ನು ಆಹ್ವಾನಿಸಿದಾಗ ಸುಪ್ರಿಂ ಕೋರ್ಟಿನ ನಿರ್ದೇಶನದ ಮೇರೆಗೆ ಆದಾಗಲೇ 248 ನೌಕರರನ್ನು ಸರಕಾರ ಖಾಯಂಗೊಳಿಸಿದ ದಾಖಲೆಗಳನ್ನು ನೀಡಲಾಯಿತು, ಕೂಡಲೇ ಅಪರ ಜಿಲ್ಲಾಧಿಕಾರಿಗಳ ನೇತೃತ್ವದ ತಂಡವನ್ನು ರಚಿಸಿ ಈ ಕುರಿತ ವಿಶ್ಲೇಷಣೆಗೂ ಆದೇಶಿಸಿದರು. ಕಂದಾಯ ಇಲಾಖೆಯಲ್ಲಿಯೇ ಇದೇ ಶರ್ತಗಳನ್ನು ಪೂರೈಸಿದ ನೌಕರರನ್ನು ಖಾಯಂಗೊಳಿಸಿದ ನಿದರ್ಶನವನ್ನೂ ನೀಡಿದೆವು. ಆದರೆ ಯಾುದೇ ಪ್ರಯೋಜನವಾಗಲಿಲ್ಲ ಎಂದರು.
ಕಳೆದ 12 ವರ್ಷಗಳಲ್ಲಿ ಜಿಲ್ಲಾಡಳಿತಕ್ಕೆ ಹಾಗೂ ಮೇಲಾಧಿಕಾರಿಗಳಿಗೆ ನೀಡಿದ ಹಲವಾರು ಅರ್ಜಿ, ಮನವಿಗಳು ವಿಫಲವಾದ ಹಿನ್ನೆಲೆಯಲ್ಲಿ ಈ ನೌಕರರೆಲ್ಲ 2014ರಲ್ಲಿ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನವನ್ನು ಆಶ್ರಯಿಸಿದರು. ಈ ಕುರಿತು ಚರ್ಚಿಸಲು ಆಗಿನ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ಪ್ರತಿಷ್ಠಾನದ ಪದಾಧಿಕಾರಿಗಳನ್ನು ಆಹ್ವಾನಿಸಿದಾಗ ಸುಪ್ರಿಂ ಕೋರ್ಟಿನ ನಿರ್ದೇಶನದ ಮೇರೆಗೆ ಆದಾಗಲೇ 248 ನೌಕರರನ್ನು ಸರಕಾರ ಖಾಯಂಗೊಳಿಸಿದ ದಾಖಲೆಗಳನ್ನು ನೀಡಲಾಯಿತು, ಕೂಡಲೇ ಅಪರ ಜಿಲ್ಲಾಧಿಕಾರಿಗಳ ನೇತೃತ್ವದ ತಂಡವನ್ನು ರಚಿಸಿ ಈ ಕುರಿತ ವಿಶ್ಲೇಷಣೆಗೂ ಆದೇಶಿಸಿದರು. ಕಂದಾಯ ಇಲಾಖೆಯಲ್ಲಿಯೇ ಇದೇ ಶರ್ತಗಳನ್ನು ಪೂರೈಸಿದ ನೌಕರರನ್ನು ಖಾಯಂಗೊಳಿಸಿದ ನಿದರ್ಶನವನ್ನೂ ನೀಡಿದೆವು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ ಎಂದರು.
ಮತ್ತೆ ಅದೇ ರಾಗ !: ಜಿಲ್ಲಾಡಳಿತಕ್ಕೆ ಇಷ್ಟೆಲ್ಲಾ ದಾಖಲೆಗಳನ್ನು ನೀಡಿದ ಮೇಲೂ ಕಳೆದೆರಡು ವರ್ಷಗಳ ಕಾಲ ನೌಕರರನ್ನು ಖಾಯಂ ಮಾಡುವ ಬಗ್ಗೆ ಯಾವ ಕ್ರಮವೂ ನಡೆಯಲಿಲ್ಲ, ಬದಲಾಗಿ ಜಿಲ್ಲಾಡಳಿತ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಹಿಂದಿನಂತೆಯೇ ಸೂಕ್ತಕ್ರಮಕ್ಕಾಗಿ ಇನ್ನೊಂದು ಪತ್ರಬರೆದು ಕೈತೊಳೆದುಕೊಂಡಿದೆ! ಎಂದರು.
ಖಾಯಂಗೊಳ್ಳುವ ಎಲ್ಲಾ ಅರ್ಹತೆ ಇದ್ದೂ, ದಿನಗೂಲಿ ನೌಕರರಾಗಿ ಇತರ ಸರಕಾರಿ ನೌಕರರಿಗೆ ಸಿಗುತ್ತಿರುವ ಸಂಬಳದ ನಾಲ್ಕನೇ ಒಂದು ಭಾಗ (ಶೇ.25ರಷ್ಟು) ವನ್ನಷ್ಟೇ ಇನ್ನೂ ಪಡೆಯುತ್ತಿರುವ ಇವರಿಗೆ ಸರಕಾರದ ಯಾವುದೇ ಸೌಲಭ್ಯವೂ ಸಿಗುತ್ತಿಲ್ಲ. ನಿವೃತ್ತಿ ನಂತರದ ಸೌಲಭ್ಯದಿಂದಲೂ ಇವರು ವಂಚಿತರಾಗಲಿದ್ದಾರೆ ಎಂದರು.
ತಮ್ಮ ನಂತರ ಕೆಲಸಕ್ಕೆ ಸೇರಿದವರು ನಮ್ಮದೇ ಕೆಲಸಕ್ಕೆ ನಮಗಿಂತ ನಾಲ್ಕು ಪಟ್ಟು ಹೆಚ್ಚು ಸಂಬಳದೊಂದಿಗೆ ಎಲ್ಲಾ ಸೌಲಭ್ಯಗಳನ್ನು ಪಡೆಯುತಿದ್ದಾರೆ. ನಾವು ಎಲ್ಲಾ ಸೌಲಭ್ಯದಿಂದ ವಂಚಿತರಾಗಿ ಮೂರು ದಶಕಗಳಿಂದ ದುಡಿಯುತಿದ್ದೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಸಂತ್ರಸ್ಥ ನೌಕರರು ದೂರಿದರು.
ಇವರಿಗೆ ನ್ಯಾಯ ದೊರಕಿಸಿ ಕೊಡಲು ಕೆಲವೇ ದಿನಗಳಲ್ಲಿ ಕರ್ನಾಟಕದ ಆಡಳಿತ ನ್ಯಾಯಮಂಡಳಿ (ಕೆಎಟಿ) ಯಲ್ಲಿ ಈ ಕುರಿತ ದಾವೆಹೂಡಲು ಪ್ರತಿಷ್ಠಾನ ತಯಾರಿ ನಡೆಸಿದ್ದು. ಈ ನ್ಯಾಯವಂಚಿತರಿಗೆ ಪೂರ್ಣ ಪ್ರಮಾಣದ ವೇತನ ಹಾಗೂ ನಿವೃತ್ತಿ ಸೌಲ್ಯಗಳು ಸಿಗುವವರೆಗೂ ಹೋರಾಟ ನಡೆಯಲಿದೆ. ಇಂತಹ ಪ್ರಕರಣಗಳಲ್ಲಿ ಇನ್ನೂ ನ್ಯಾಯ ಸಿಗದವರು ಪ್ರತಿಷ್ಠಾನವನ್ನು ಕೂಡಲೇ ಸಂಪರ್ಕಿಸಬಹುದು ಎಂದು ಡಾ. ರವೀಂದ್ರನಾಥ ಶ್ಯಾನುಭಾಗ್ ತಿಳಿಸಿದರು.







