ಬೆಂಗಳೂರು ಉಪನಗರ ರೈಲು ಯೋಜನೆಗೆ ಅಸ್ತು : ಜಯಚಂದ್ರ

ಬೆಂಗಳೂರು, ಜ.31: ಬೆಂಗಳೂರು ಉಪನಗರ ರೈಲು ಯೋಜನೆ ಹಂತ 1‘ಎ’ ಕಾಮಗಾರಿಗಳನ್ನು 1745 ಕೋಟಿ ರೂ.ವೆಚ್ಚದಲ್ಲಿ ಕೇಂದ್ರ ರೈಲ್ವೆ ಇಲಾಖೆಯ ಸಹಯೋಗದೊಂದಿಗೆ ಕೈಗೆತ್ತಿಕೊಳ್ಳಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.
ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎಲ್ಲ ಕಾಮಗಾರಿಗಳನ್ನು ವಿಶೇಷ ಉದ್ದೇಶ ವಾಹಕ ಮೂಲಕ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರದ ರೈಲ್ವೆ ಇಲಾಖೆಯು ಸಮಾನ ಅನುದಾನ ಹಂಚಿಕೆಯಡಿಯಲ್ಲಿ ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದರು.
2018-19, 2019-20 ಎರಡು ವರ್ಷದಲ್ಲಿ 340 ಕೋಟಿ ರೂ.ಗಳನ್ನು ಸರಕಾರದ ವತಿಯಿಂದ ನೀಡಲಾಗುವುದು. ಈ ಯೋಜನೆಯಡಿಯಲ್ಲಿ 58 ರೈಲುಗಳು, 116 ಸೇವೆಗಳನ್ನು ಒದಗಿಸಲಿವೆ. ಪ್ರತಿಯೊಂದು ರೈಲಿನ ಸಾಮರ್ಥ್ಯವು 1800-2000 ಪ್ರಯಾಣಿಕರನ್ನು ಒಳಗೊಂಡಿರಲಿದೆ ಎಂದು ಅವರು ಹೇಳಿದರು.
ಉದ್ದೇಶಿತ ಮಾರ್ಗಗಳು: ಬೆಂಗಳೂರು-ಮಂಡ್ಯ, ಬೆಂಗಳೂರು-ಯಶವಂತಪುರ, ಯಶವಂತಪುರ-ತುಮಕೂರು, ಯಶವಂತಪುರ-ಯಲಹಂಕ, ಯಲಹಂಕ- ಬೈಯಪ್ಪನಹಳ್ಳಿ, ಯಶವಂತಪುರ-ಬೈಯಪ್ಪನಹಳ್ಳಿ, ಯಲಹಂಕ-ದೊಡ್ಡಬಳ್ಳಾಪುರ, ಯಲಹಂಕ-ಚಿಕ್ಕಬಳ್ಳಾಪುರ, ಬೈಯಪ್ಪನಹಳ್ಳಿ-ಹೊಸೂರು, ಬೆಂಗಳೂರು- ಬಂಗಾರಪೇಟೆ, ಸೋಲದೇವನಹಳ್ಳಿ-ಕುಣಿಗಲ್, ಒಟ್ಟಾರೆಯಾಗಿ ಈ ಮಾರ್ಗಗಳ ವಿಸ್ತೀರ್ಣವು 460 ಕಿ.ಮೀ ಆಗಲಿದೆ ಎಂದು ಜಯಚಂದ್ರ ತಿಳಿಸಿದರು.







