ಜಪ್ಪು ಭೂಕಬಳಿಕೆ ಆರೋಪದ ಬಗ್ಗೆ ಬಿಷಪ್ ಸ್ಪಷ್ಟೀಕರಣ
ಮಂಗಳೂರು, ಜ.31: ಮಂಗಳೂರಿನ ಜಪ್ಪುವಿನಲ್ಲಿರುವ ಸಂತ ಜೋಸೆಫ್ ಅನಾಥಾಲಯವು ಮಂಗಳೂರಿನ ಪ್ರಧಾನ ಧರ್ಮಗುರುಗಳಾದ ಡಾ. ಅಲೋಶಿಯಸ್ ಪೌಲ್ ಡಿಸೋಜ ಅವರ ಅಧೀನದಲ್ಲಿದೆ. ನಾವು ಯಾವುದೇ ಸರಕಾರಿ ಭೂಮಿಯನ್ನು ಕಬಳಿಸಿಲ್ಲ ಅಥವಾ ಕಾನೂನುಬಾಹಿರ ಕಾರ್ಯದಲ್ಲಿ ತೊಡಗಿಲ್ಲ ಎಂದು ಪ್ರಧಾನ ಧರ್ಮಗುರುಗಳ ಪರವಾಗಿ ನೀಡಲಾಗಿರುವ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಇಲ್ಲಿನ ಜಮೀನಿನಲ್ಲಿ ಮಾನವೀಯತೆಯ ನೆಲೆಯಲ್ಲಿ ವಲೇರಿಯನ್ ಟೆಕ್ಸೆರ ಮತ್ತು ವಿಕ್ಟರ್ ಪಾಯಸ್ ಅವರಿಗೆ ನೆಲೆಸಲು ಮತ್ತು ಕೆಲಸ ಮಾಡಲು ಅನುವು ಮಾಡಿಕೊಡಲಾಗಿತ್ತು. ಸದ್ಯ ಅನಾಥಾಲಯವು ಈ ಇಬ್ಬರು ಜಮೀನನ್ನು ತೆರವುಗೊಳಿಸಬೇಕೆಂದು ಕೋರಿ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದೆ. ಈ ಪ್ರಕರಣವು ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿಯಿದೆ. ಹಾಗಾಗಿ ಧರ್ಮಗುರುಗಳ ಹೆಸರಿಗೆ ಮಸಿ ಬಳಿಯಬೇಕೆಂಬ ಉದ್ದೇಶದಿಂದ ಲೋಕಾಯುಕ್ತರಲ್ಲಿ ಅವರ ವಿರುದ್ಧ ಸುಳ್ಳು ದೂರು ದಾಖಲಿಸಲಾಗಿದೆ. ಈ ಬಗ್ಗೆ ಜನವರಿ 28, 2018ರಂದು ವಿಚಾರಣೆ ನಡೆಸಿದ ಉಪಲೋಕಾಯುಕ್ತರು ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ ಮತ್ತು ಈ ಪ್ರಕರಣವು ತನ್ನ ವ್ಯಾಪ್ತಿಗೆ ಬರುವುದಿಲ್ಲ ಎಂದು ತಿಳಿಸಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
ತಾವು ನೆಲೆಸಿರುವ ಜಮೀನು ಸರಕಾರಕ್ಕೆ ಸೇರಿದ್ದು ಇಲ್ಲಿ ಹಲವು ದಶಕಗಳಿಂದ ವಾಸಿಸುತ್ತಿದ್ದೇವೆ. ಆದರೆ ಪ್ರತಿವಾದಿಗಳು ಅಕ್ರಮವಾಗಿ ನಮ್ಮನ್ನು ತೆರವುಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಲೋಕಾಯುಕ್ತರಿಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿತ್ತು.
ಇಲ್ಲಿ ದೂರುದಾರರು ತಿಳಿಸಿರುವ ಜಾಗವು ಸರಕಾರಕ್ಕೆ ಸೇರಿದೆಯೇ ಅಥವಾ ಅದರ ಮೇಲೆ ಪ್ರತಿವಾದಿಗಳಿಗೆ ಹಕ್ಕಿದೆಯೇ ಅಥವಾ ಬಿಷಪ್ ಅವರ ಖಾಸಗಿ ಹಕ್ಕುಗಳಿಗೆ ಚ್ಯುತಿ ಬರದಂತೆ ದೂರುದಾರರ ಹಿತಾಸಕ್ತಿಯನ್ನು ಕಾಪಾಡಲು ಜಿಲ್ಲಾಡಳಿತವು ಪರ್ಯಾಯ ವ್ಯವಸ್ಥೆಯನ್ನು ಮಾಡಲಿದೆಯೇ ಎಂಬುದನ್ನು ಪರಿಗಣಿಸಲು ಮಾತ್ರ ಸಾಧ್ಯ. ಹಾಗಾಗಿ ಈ ಬಗ್ಗೆ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ 20 ದಿನಗಳ ಒಳಗಾಗಿ ವರದಿ ನೀಡುವಂತೆ ಉಪ ಆಯುಕ್ತರು ಹಾಗೂ ತಹಶೀಲ್ದಾರ್ ಅವರಿಗೆ ಸೂಚಿಸಲಾಗಿದೆ ಎಂದು ಉಪಲೋಕಾಯುಕ್ತರು ತಿಳಿಸಿದ್ದಾರೆ.
ಲೋಕಾಯುಕ್ತರ ಆದೇಶದನ್ವಯ ದೂರುದಾರರೇ ಜಮೀನಿನ ಮೇಲಿನ ತಮ್ಮ ಹಕ್ಕನ್ನು ಸಾಬೀತುಪಡಿಸಬೇಕಿದೆ. ಆದರೆ ಬಿಷಪ್ ಅವರ ವಿರುದ್ಧ ತನಿಖೆ ನಡೆಸುವಂತೆ ಲೋಕಾಯುಕ್ತ ಆದೇಶ ನೀಡಿದೆ ಎಂದು ಕೆಲವು ಮಾಧ್ಯಮಗಳು ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಿವೆ. ಇಂಥ ಯಾವುದೇ ಆದೇಶವನ್ನು ಉಪಲೋಕಾಯುಕ್ತರು ನೀಡಿಲ್ಲ. ಜಮೀನಿಗೆ ಸಂಬಂಧಪಟ್ಟ ಎಲ್ಲ ದಾಖಲೆಗಳು ಬಿಷಪ್ ಅವರ ಬಳಿಯಿದೆ. ಮತ್ತೊಂದೆಡೆ ಉಪಲೋಕಾಯುಕ್ತರೇ ಬಿಷಪ್ ಅವರ ಹಕ್ಕನ್ನು ಎತ್ತಿಹಿಡಿದಿದ್ದಾರೆ. ಆಮೂಲಕ ಬಿಷಪ್ ಅವರ ಮೇಲೆ ಮಾಡಲಾದ ಆರೋಪ ಸುಳ್ಳು ಎಂದು ಸಾಬೀತಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.







