ಅತ್ಯಾಚಾರಕ್ಕೊಳಗಾದ 8 ತಿಂಗಳ ಹಸುಳೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ,ಜ.31: ದಿಲ್ಲಿಯಲ್ಲಿ ಅತ್ಯಾಚಾರಕ್ಕೊಳಗಾಗಿರುವ ಎಂಟು ತಿಂಗಳ ಹೆಣ್ಣು ಮಗುವಿನ ಬಗ್ಗೆ ತಾನು ತೀವ್ರ ಕಳವಳಗೊಂಡಿದ್ದೇನೆ ಎಂದು ಬುಧವಾರ ಹೇಳಿದ ಸರ್ವೋಚ್ಚ ನ್ಯಾಯಾಲಯವು,ಆಕೆಯ ಚಿಕಿತ್ಸೆಗಾಗಿ ಇಬ್ಬರು ಸಮರ್ಥ ವೈದ್ಯರನ್ನು ತಕ್ಷಣವೇ ಕಳುಹಿಸುವಂತೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್)ಗೆ ಆದೇಶಿಸಿದೆ.
ಬಾಲಕಿಯ ವೈದ್ಯಕೀಯ ಸ್ಥಿತಿಯ ಬಗ್ಗೆ ಗುರುವಾರದೊಳಗೆ ತನಗೆ ವರದಿಯನ್ನು ಸಲ್ಲಿಸುವಂತೆಯೂ ಅದು ಸೂಚಿಸಿದೆ.
ಏಮ್ಸ್‌ನ ವೈದ್ಯರು ಪ್ರಕರಣದ ಉಸ್ತುವಾರಿ ವಹಿಸಿಕೊಳ್ಳಬೇಕು ಮತ್ತು ಸಂತ್ರಸ್ತ ಮಗುವನ್ನು ಏಮ್ಸ್‌ಗೆ ಸ್ಥಳಾಂತರಿಸುವ ಬಗ್ಗೆ ನಿರ್ಧರಿಸಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯ ವಿಚಾರಣೆ ಸಂದರ್ಭ ಸೂಚಿಸಿದ ಮು.ನ್ಯಾ.ಮಿಶ್ರಾ ಅವರು, ಏಮ್ಸ್‌ಗೆ ಸ್ಥಳಾಂತರ ಸಾಧ್ಯವಿಲ್ಲದಿದ್ದರೆ ವೈದ್ಯರು ಮಗುವಿಗೆ ಖುದ್ದಾಗಿ ವೈದ್ಯಕೀಯ ನೆರವನ್ನು ನೀಡಬೇಕು ಎಂದು ಆದೇಶಿಸಿದರು. ಪ್ರಕರಣದಲ್ಲಿ ನೆರವಾಗುವಂತೆ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೂ ಆದೇಶಿಸಿದ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಫೆ.1ಕ್ಕೆ ನಿಗದಿಗೊಳಿಸಿತು.
ನ್ಯಾಯವಾದಿ ಅಲಖ್ ಅಲೋಕ ಶ್ರೀವಾಸ್ತವ ಅವರು ಸಲ್ಲಿಸಿರುವ ಪಿಐಎಲ್, 12ವರ್ಷ ಪ್ರಾಯದವರೆಗಿನ ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳ ತನಿಖೆ ಮತ್ತು ವಿಚಾರಣೆ ಆರು ತಿಂಗಳೊಳಗೆ ಪೂರ್ಣಗೊಳ್ಳುವಂತಾಗಲು ಮಾರ್ಗಸೂಚಿಗಳನ್ನು ತುರ್ತಾಗಿ ರೂಪಿಸುವಂತೆ ಆಗ್ರಹಿಸಿದೆ.
ಈಗಿರುವಂತೆ ಪೊಕ್ಸೊ ಕಾಯ್ದೆಯಡಿ ಅಪರಾಧಿಗಳಿಗೆ ಗರಿಷ್ಠ ಜೀವಾವಧಿ ಶಿಕ್ಷೆಯನ್ನು ವಿಧಿಸಬಹುದಾಗಿದೆ. ಆದ್ದರಿಂದ 12 ವರ್ಷ ಪ್ರಾಯದವರೆಗಿನ ಮಕ್ಕಳು ಬಲಿಪಶುಗ ಳಾಗಿರುವ ಪ್ರಕರಣಗಳಲ್ಲಿ ಮರಣ ದಂಡನೆಯು ಗರಿಷ್ಠ ಶಿಕ್ಷೆಯಾಗಬೇಕೆಂದು ತಾನು ಅರ್ಜಿಯಲ್ಲಿ ಹೇಳಿದ್ದೇನೆ ಎಂದು ಶ್ರೀವಾಸ್ತವ ಸುದ್ದಿಗಾರರಿಗೆ ತಿಳಿಸಿದರು.
ರವಿವಾರ ವಾಯುವ್ಯ ದಿಲ್ಲಿಯ ನೇತಾಜಿ ಸುಭಾಷ್ ಪ್ಲೇಸ್‌ನಲ್ಲಿ ಈ ಹೇಯ ಘಟನೆ ನಡೆದಿತ್ತು. ಗುಪ್ತಾಂಗಗಳಿಗೆ ತೀವ್ರ ಗಾಯಗಳಾಗಿದ್ದ ಮಗುವಿಗೆ ಮಂಗಳವಾರ ಮೂರು ಗಂಟೆಗಳ ಅವಧಿಯ ಸುದೀರ್ಘ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಇನ್ನೂ ತೀವ್ರ ನಿಗಾ ಘಟಕದಲ್ಲಿರುವ ಅದರ ದೇಹಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದರು.
ಮಗುವಿನ ಹೆತ್ತವರು ಕೆಲಸಕ್ಕೆ ಹೋಗುತ್ತಿದ್ದು, ತಮ್ಮ ಮಗುವನ್ನು ಅತ್ತಿಗೆಯ ರಕ್ಷಣೆಯಲ್ಲಿ ಬಿಡುತ್ತಿದ್ದರು. ರವಿವಾರ ಆಕೆಯ 28ರ ಹರೆಯದ ಮಗ ಮನೆಯಲ್ಲಿಯೇ ಇದ್ದು, ತಾಯಿ ಹೊರಗಡೆ ಹೋಗಿದ್ದ ಸಂದರ್ಭದಲ್ಲಿ ಮಗುವಿನ ಮೇಲೆ ಅತ್ಯಾಚಾರ ವೆಸಗಿದ್ದ.
ಮದ್ಯಪಾನದ ಮತ್ತಿನಲ್ಲಿ ತಾನು ಮಗುವಿನ ಮೇಲೆ ಅತ್ಯಾಚಾರವೆಸಗಿದ್ದನ್ನು ಆರೋಪಿಯು ಒಪ್ಪಿಕೊಂಡಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.