ಸ್ವಾರ್ಥ ಸಾಧನೆಗಾಗಿ ಶಾಸಕ ಸ್ಥಾನಕ್ಕೆ ಹಾಲಾಡಿ ರಾಜಿನಾಮೆ: ರಾಕೇಶ್ ಮಲ್ಲಿ ಆರೋಪ

ರಾಕೇಶ್ ಮಲ್ಲಿ
ಕುಂದಾಪುರ, ಜ.31: ಕಳೆದ ವಿಧಾನಸಭಾ ಚುನಾವಣೆಯ ವೇಳೆ ಬಿಜೆಪಿಗೆ ರಾಜಿನಾಮೆ ನೀಡಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಂದರ್ಭದಲ್ಲಿ ಮತ್ತೊಮ್ಮೆ ಬಿಜೆಪಿಗೆ ಸೇರದೆ ಕ್ಷೇತ್ರವನ್ನು ಜಾತ್ಯಾತೀತವಾಗಿ ಪ್ರತಿನಿಧಿಸುವುದಾಗಿ ಆಶ್ವಾಸನೆ ನೀಡಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು, ಇದೀಗ ಮತ್ತೆ ಬಿಜೆಪಿ ಸೇರುವ ಕಾರಣಕ್ಕೆ ಮತ ನೀಡಿ ಚುನಾಯಿಸಿದ ಜನರನ್ನು ಕಡೆಗಣಿಸಿ ತನ್ನ ಸ್ವಾರ್ಥ ಸಾಧನೆಗಾಗಿ ಕ್ಷೇತ್ರದ ಮತದಾರರಿಗೆ ದ್ರೋಹ ಬಗೆದಿದ್ದಾರೆ ಎಂದು ರಾಜ್ಯ ಇಂಟಕ್ ಅಧ್ಯಕ್ಷ ರಾಕೇಶ್ ಮಲ್ಲಿ ಆರೋಪಿಸಿದ್ದಾರೆ.
ಹಾಲಾಡಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಇವರಿಗೆ ಮತ ನೀಡಿ ಚುನಾಯಿಸಿದ ಕ್ಷೇತ್ರದ ಸರ್ವ ಜಾತಿ, ಧರ್ಮಗಳ ಮತದಾರರಿಗೆ ಮಾಡಿದ ದ್ರೋಹವಾಗಿದೆ ಎಂದು ಮಲ್ಲಿ ಪತ್ರಿಕೆಗಳಿಗೆ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ವರ್ಷದ ಬಜೆಟ್ ಮಂಡನೆಯಾಗುತ್ತಿರುವ ಇಂತಹ ಮಹತ್ವದ ಸಂದಭರ್ದಲ್ಲಿ ಕುಂದಾಪುರ ಕ್ಷೇತ್ರಕ್ಕೆ ಅಗತ್ಯದ ಅನುದಾನವನ್ನು ಮಂಜೂರು ಮಾಡಿಸುವ ಮತ್ತು ಕ್ಷೇತ್ರದ ಹಲವು ಜ್ವಲಂತ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಬದಲು ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವ ಮೂಲಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಕ್ಷೇತ್ರವನ್ನು ಅನಾಥಗೊಳಿಸಿದ್ದಾರೆ ಎಂದವರು ದೂರಿದರು.
ಇದಕ್ಕೆ ಹಿಂದಿನ ಸಲ ಸಹ ಇದೇ ರೀತಿ ಆಗಿತ್ತು. 2012ರಲ್ಲಿ ಅವಧಿಗೆ ಮುಂಚಿತವಾಗಿ ಹಾಲಾಡಿ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ ಕಾರಣಕ್ಕೆ ರಾಜ್ಯ ಸರಕಾರದಿಂದ ಬರಬಹುದಾಗಿದ್ದ ಅನುದಾನದಿಂದ ಕುಂದಾಪು ಕ್ಷೇತ್ರ ವಂಚಿತವಾಗಿತ್ತು ಎಂದರು.
ವಸತಿ ಸಮಿತಿ, ನಿವೇಶನ ಸಮಿತಿ, ಆಶ್ರಯ ಸಮಿತಿ, ಅಕ್ರಮ-ಸಕ್ರಮ ಮುಂತಾದ ಸಮಿತಿಗಳಲ್ಲಿ ಕ್ಷೇತ್ರದ ಸಾವಿರಾರು ಅರ್ಜಿಗಳು ಇತ್ಯರ್ಥವಾಗದೆ ಬಾಕಿ ಉಳಿದಿದ್ದು, ಈ ಸಮಿತಿಗಳ ಅಧ್ಯಕ್ಷರಾಗಿ ಅರ್ಜಿಗಳನ್ನು ಇತ್ಯರ್ಥ ಗೊಳಿಸುವ, ಜನರ ಸಮಸ್ಯೆಗಳನ್ನು ಪರಿಹರಿಸುವ ಅವಕಾಶ ಮತ್ತು ಅಧಿಕಾರ ಇನ್ನೂ ನಾಲ್ಕು ತಿಂಗಳು ಇದ್ದರೂ, ಈ ಬಗ್ಗೆ ಎಳ್ಳಷ್ಟು ಚಿಂತಿಸದೆ ರಾಜಿನಾಮೆ ನೀಡಿರುವುದು ಕ್ಷೇತ್ರದ ಮತದಾರರ ಸಮಸ್ಯೆಗಳ ಕುರಿತು ಅವರಿಗಿರುವ ಅನಾದರವನ್ನು ಎತ್ತಿ ತೋರಿಸುತ್ತದೆ ಎಂದು ರಾಕೇಶ್ ಮಲ್ಲಿ ಹೇಳಿದ್ದಾರೆ.
ಕುಂದಾಪುರ ವಿಧಾನಸಬಾ ಕ್ಷೇತ್ರ ಸಿಆರ್ಝಡ್ ಸಮಸ್ಯೆಯಿಂದ ಬಳಲುತ್ತಿದ್ದು ಕ್ಷೇತ್ರದ ಜನರು ಗೋವಾ ಮತ್ತು ಕೇರಳ ಮಾದರಿಯಲ್ಲಿ ಸಿಆರ್ಝಡ್ ವ್ಯಾಪ್ತಿಯನ್ನು 50 ಮೀ.ಗೆ ಇಳಿಸುವ ಬೇಡಿಕೆ ಇಟ್ಟಿದ್ದರೂ ಸ್ಥಳೀಯ ಶಾಸಕರು ಆ ಕುರಿತು ಇದುವರೆಗೆ ಯಾವುದೇ ಪ್ರಯತ್ನ ನಡೆಸಿಲ್ಲ. ಡೀಮ್ಡ್ ಫಾರೆಸ್ಟ್ ವ್ಯಾಪ್ತಿಗೆ ಈ ಕ್ಷೇತ್ರದ ವಸತಿ ಪ್ರದೇಶವನ್ನು ಸೇರಿಸಿರುವುದರ ಬಗ್ಗೆ ಸಹ ಚಕಾರವೆತ್ತ ದಿರುವುದು ನಿಜಕ್ಕೂ ಖೇಧನೀಯ ಎಂದು ರಾಕೇಶ್ ಮಲ್ಲಿ ಟೀಕಿಸಿದ್ದಾರೆ.







