ಮೈಸೂರು : ಭೀಕರ ರಸ್ತೆ ಅಪಘಾತಕ್ಕೆ ಮೂವರು ಬಲಿ

ಮೈಸೂರು,ಜ.31: ಅತಿವೇಗದಿಂದ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಿಂಗ್ ರಸ್ತೆಯಿಂದ ಸರ್ವೀಸ್ ರಸ್ತೆಗೆ ಬಂದು ಬಿದ್ದಿದ್ದು, ಯುವತಿ ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಮೈಸೂರು ಹೊರವಲಯದ ರಿಂಗ್ ರಸ್ತೆಯಲ್ಲಿ ನಡೆದಿದೆ.
ನಗರದ ಹೊರವಲಯದ ದಟ್ಟಗಳ್ಳಿ ರಿಂಗ್ ರಸ್ತೆಯ ಆಚಾರ್ಯ ಸಭಾ ಭವನದ ಬಳಿ ಅಪಘಾತ ಸಂಭವಿಸಿದೆ. ರಿಂಗ್ ರಸ್ತೆಯ ಸಣ್ಣ ತಿರುವಿನಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಿಂಗ್ ರಸ್ತೆಯಿಂದ ಸರ್ವೀಸ್ ರಸ್ತೆಯಲ್ಲಿ ಹಾಕಲಾಗಿದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಕೆಳಕ್ಕೆ ಉರುಳಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಕಾರಿನ ಬಾಗಿಲುಗಳು ಕಿತ್ತು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಸ್ಥಳದಲ್ಲೇ ಓರ್ವಳು ಯುವತಿ, ಇಬ್ಬರು ಯುವಕರು ಸಾವನ್ನಪ್ಪಿದ್ದು, ಗಂಭೀರ ಗಾಯಗೊಂಡ ಇನ್ನಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ನಗರದ ಸೇಂಟ್ ಜೋಸೆಫ್ ಕಾಲೇಜಿನ ವಿದ್ಯಾರ್ಥಿ ಆಸಿಂ, ಹುಣಸೂರಿನ ಮೊಹಮ್ಮದ್ ಫರಾನ್, ಯುವರಾಜ ಕಾಲೇಜಿನ ವಿದ್ಯಾರ್ಥಿನಿ ದಿವ್ಯ ಸ್ಥಳದಲ್ಲೇ ಮೃತಪಟ್ಟವರಾಗಿದ್ದಾರೆ. ರಿಯಾನ್ಹುಲ್ ರೆಹಮಾನ್ ಮತ್ತು ಸ್ಫೂರ್ತಿ ತೀವ್ರವಾಗಿ ಗಾಯಗೊಂಡವರಾಗಿದ್ದಾರೆ. ಇವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಕೆ.ಆರ್.ಸಂಚಾರಿ ಠಾಣೆಯ ಪೊಲೀಸರು,ಕುವೆಂಪುನಗರ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.





