ರಾಜ್ಯದಲ್ಲಿ ಇವಿಎಂ ಬದಲು ಬ್ಯಾಲೆಟ್ ಪೇಪರ್ ಮೂಲಕ ಮತದಾನ : ಚುನಾವಣಾ ಆಯೋಗಕ್ಕೆ ಅಹವಾಲು ಸಲ್ಲಿಕೆ

ಬೆಂಗಳೂರು, ಜ.31: ರಾಜ್ಯ ವಿಧಾನಸಭೆಗೆ ಈ ವರ್ಷ ನಡೆಯಲಿರುವ ಚುನಾವಣೆಯನ್ನು ಇಲೆಕ್ಟ್ರಾನಿಕ್ ಮತಯಂತ್ರ(ಇವಿಎಂ)ದ ಬದಲು ಬ್ಯಾಲೆಟ್ ಪೇಪರ್(ಮತ ಪತ್ರ) ಮೂಲಕ ನಡೆಸುವುದು ಸೇರಿದಂತೆ ಇನ್ನಿತರ ಅಹವಾಲುಗಳು ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಕೆಯಾಗಿವೆ.
ಬುಧವಾರ ವಿಕಾಸಸೌಧದಲ್ಲಿ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಓಂಪ್ರಕಾಶ್ ರಾವತ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಇವಿಎಂ ಬದಲು ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸುವುದು, ಮತದಾರರ ಪಟ್ಟಿಯಲ್ಲಿ ಲೋಪ ಸರಿಪಡಿಸುವುದು ಸೇರಿದಂತೆ ಇನ್ನಿತರ ಅಹವಾಲುಗಳನ್ನು ಸಲ್ಲಿಸಿದರು.
ರಾಜ್ಯದಲ್ಲಿ ನ್ಯಾಯ ಸಮ್ಮತ ಹಾಗೂ ಪಾರದರ್ಶಕ ಚುನಾವಣೆ ನಡೆಯಬೇಕು. ಚುನಾವಣಾ ಆಯೋಗದ ಕಣ್ಣು ತಪ್ಪಿಸಿ ನಡೆಸುವಂತಹ ಚುನಾವಣಾ ಅಕ್ರಮಗಳಿಗೆ ಕಡಿವಾಣ ಹಾಕಬೇಕು ಎಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮನವಿ ಸಲ್ಲಿಸಿವೆ.
ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಬೇಕು, ಉತ್ತರ ಪ್ರದೇಶ, ಗುಜರಾತ್ ವಿಧಾನಸಭಾ ಚುನಾವಣೆಯ ನಂತರ ರಾಜಕೀಯ ಪಕ್ಷಗಳು ಹಾಗೂ ಮತದಾರರು ಇವಿಎಂಗಳ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಆದುದರಿಂದ, ರಾಜ್ಯದಲ್ಲಿ ಇವಿಎಂ ಬದಲು ಬ್ಯಾಲೆಟ್ ಪೇಪರ್ ಮೂಲಕವೇ ಚುನಾವಣೆ ನಡೆಸಬೇಕು ಎಂದು ಬಿಜೆಪಿ ಹೊರತುಪಡಿಸಿ ಉಳಿದ ಪಕ್ಷಗಳು ಆಗ್ರಹಿಸಿವೆ ಎನ್ನಲಾಗಿದೆ.
‘ಜಾತಿ, ಧರ್ಮಗಳ ಮೇಲೆ ಚುನಾವಣೆ ಮಾಡುವುದನ್ನು ನಿಗ್ರಹಿಸಬೇಕು. 2018-19ನೇ ಸಾಲಿನ ಬಜೆಟ್ ಚುನಾವಣೆ ಪ್ರೇರಿತ ಆಗಿರುವುದರಿಂದ ಅದಕ್ಕೆ ತಡೆ ಕೊಡಬೇಕು’ ಎಂದು ಜೆಡಿಎಸ್ ವಕ್ತಾರ ರಮೇಶ್‌ಬಾಬು ಆಗ್ರಹಿಸಿದ್ದಾರೆ. ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ಪೊಲೀಸ್ ಅಧಿಕಾರಿಗಳೂ ಸೇರಿದಂತೆ ಮೂರು ವರ್ಷಗಳಿಂದ ಒಂದೇ ಕಡೆ ಇರುವ ಅಧಿಕಾರಿಗಳನ್ನು ಕಡ್ಡಾಯವಾಗಿ ವರ್ಗಾವಣೆ ಮಾಡಬೇಕು ಎಂದು ಮನವಿ ಮಾಡಲಾಗಿದೆ.
ರಾಜಕೀಯ ಪಕ್ಷಗಳ ಪ್ರತಿನಿಧಿಗಳು ನೀಡಿದ ಅಹವಾಲು ಆಲಿಸಿರುವ ಚುನಾವಣಾ ಆಯೋಗವು, ಬ್ಯಾಲೆಟ್ ಪೇಪರ್‌ನಲ್ಲಿ ಚುನಾವಣೆ ನಡೆಸುವ ಬೇಡಿಕೆಯನ್ನು ಹೊರತುಪಡಿಸಿ ಇನ್ನುಳಿದ ಬೇಡಿಕೆಗಳ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ತಿಳಿದು ಬಂದಿದೆ.







