ವಿಜ್ಞಾನ-ಗಣಿತ ಕಲಿಕೆಯಲ್ಲಿ ರಾಜ್ಯದ ಸರಕಾರಿ ಶಾಲಾ ಮಕ್ಕಳು ಹಿಂದೆ : ಸಮೀಕ್ಷೆಯಿಂದ ಬಹಿರಂಗ

ಬೆಂಗಳೂರು, ಜ. 31: ರಾಜ್ಯದ ಸರಕಾರಿ ಶಾಲೆಗಳ 8 ಲಕ್ಷ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿದಿದ್ದು, ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ಹೆಚ್ಚು ಮಕ್ಕಳು ಹಿಂದುಳಿದಿರುವ ಅಂಶ ವಿದ್ಯಾರ್ಥಿಗಳ ಮೌಲ್ಯಾಂಕನ ಸಮೀಕ್ಷೆಯಿಂದ ಗೊತ್ತಾಗಿದೆ.
ರಾಜ್ಯದಲ್ಲಿನ 50 ಸಾವಿರ ಶಾಲೆಗಳ 4ನೆ ತರಗತಿಯಿಂದ 9ನೆ ತರಗತಿಯವರೆಗಿನ 36 ಲಕ್ಷ ವಿದ್ಯಾರ್ಥಿಗಳ ಒಎಂಆರ್ ಶೀಟ್ ನೀಡಿ ಮಾಹಿತಿ ಸಂಗ್ರಹಿಸಲಾಗಿದೆ. ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಸಮೀಕ್ಷೆ ನಡೆಸಿದ್ದು, ಹಿಂದುಳಿದಿರುವ ಮಕ್ಕಳ ಕಲಿಕೆಗೆ ವಿಶೇಷ ತರಗತಿಗಳನ್ನು ನಡೆಸಲಾಗುವುದು ಎಂದು ಶಿಕ್ಷಣ ಇಲಾಖೆ ಆಯುಕ್ತ ಜಾಫರ್ ತಿಳಿಸಿದ್ದಾರೆ.
ಬುಧವಾರ ವಿಕಾಸಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಶೇ.35ಕ್ಕೂ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ಹಿಂದುಳಿದವರೆಂದು ಗುರುತಿಸಿದ್ದು, ಪರೀಕ್ಷೆ ಬರೆದ ಎಲ್ಲ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
‘ಸ್ಟಾರ್’ ಶ್ರೇಯಾಂಕ: ವಿದ್ಯಾರ್ಥಿಗಳಿಗೆ ನೀಡುವ ಅಂಕಪಟ್ಟಿಯಲ್ಲಿ ಯಾವುದೇ ಅಂಕಗಳು ಇರುವುದಿಲ್ಲ. ಶೇ.35ಕ್ಕೂ ಹೆಚ್ಚು ಅಂಕ ಪಡೆದವರಿಗೆ ಒಂದು ‘ಸ್ಟಾರ್’, ಅದಕ್ಕೂ ಹೆಚ್ಚು ಅಂಕಗಳನ್ನು ಪಡೆದವರಿಗೆ ಕ್ರಮವಾಗಿ ಎರಡು, ಮೂರು ಮತ್ತು ನಾಲ್ಕು ಸ್ಟಾರ್‌ಗಳನ್ನು ನೀಡಲಾಗಿದೆ ಎಂದು ಅವರು ವಿವರಿಸಿದರು.
ಮುಂದಿನ ದಿನಗಳಲ್ಲಿ ಬಂಗಾರ, ಬೆಳ್ಳಿ ಮತ್ತು ಕಂಚಿನ ಸ್ಟಾರ್‌ಗಳನ್ನು ಅಂಕಪಟ್ಟಿಯಲ್ಲಿ ನಮೂದು ಮಾಡಲು ಉದ್ದೇಶಿಸಲಾಗಿದೆ ಎಂದ ಅವರು, ಕಡಿಮೆ ಸ್ಟಾರ್ ಪಡೆದಿರುವ ವಿದ್ಯಾರ್ಥಿಗಳನ್ನು ಬಂಗಾರದ ಸ್ಟಾರ್ ಪಡೆಯುವ ನಿಟ್ಟಿನಲ್ಲಿ ಪ್ರೇರೇಪಿಸಲಾಗುವುದು ಎಂದು ಹೇಳಿದರು.
ಖಾಸಗಿ ಶಾಲೆಗಳ ಮಾದರಿಯಲ್ಲಿ ಸರಕಾರಿ ಶಾಲೆಗಳಲ್ಲಿ ಅಂಕಪಟ್ಟಿ ನೀಡುವುದಿಲ್ಲ. ಹೀಗಾಗಿ ಪೋಷಕರು ಖಾಸಗಿ ಶಿಕ್ಷಣ ಸಂಸ್ಥೆಗಳತ್ತ ತೆರಳುತ್ತಿರುವ ಅಂಶ ಸಮೀಕ್ಷೆಯಿಂದ ಬಹಿರಂಗವಾಗಿದೆ. ಆದುದರಿಂದ ಅಂಕಪಟ್ಟಿ ನೀಡಲಾಗುತ್ತಿದೆ ಎಂದ ಅವರು, ಪೋಷಕರನ್ನು ಶಾಲೆಗೆ ಕರೆದು ವಿದ್ಯಾರ್ಥಿ ಹಿಂದಿರುವ ವಿಷಯ ಮನವರಿಕೆ ಮಾಡಿಕೊಡಲಾಗುವುದು ಎಂದರು.







