ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ಎಸ್‌ಪಿಪಿ ಬದಲಾವಣೆಗೆ ಸರಕಾರಕ್ಕೆ ಮನವಿ ಸಲ್ಲಿಸಲು ಹೈಕೋರ್ಟ್ ನಿರ್ದೇಶನ

ಬೆಂಗಳೂರು, ಜ.31: ಉದ್ಯಮಿ ಭಾಸ್ಕರ್‌ಶೆಟ್ಟಿ ಸಾವಿಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್(ಎಸ್‌ಪಿಪಿ) ಅವರನ್ನು ಬದಲಾಯಿಸುವಂತೆ ಕೋರಿ ರಾಜ್ಯ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಮನವಿ ಸಲ್ಲಿಸಿ ಎಂದು ಮೃತರ ಪತ್ನಿಯೂ ಆದ ರಾಜೇಶ್ವರಿ ಶೆಟ್ಟಿ ಅವರಿಗೆ ಹೈಕೋರ್ಟ್ ನಿರ್ದೇಶಿಸಿದೆ.
ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಎಂ.ಶಾಂತರಾಮ ಶೆಟ್ಟಿ ಅವರನ್ನು ಬದಲಾಯಿಸುವಂತೆ ಕೋರಿ ರಾಜೇಶ್ವರಿ ಶೆಟ್ಟಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಲೇವಾರಿ ಮಾಡಿದೆ.
ಈ ಸಂಬಂಧ ರಾಜೇಶ್ವರಿ ಶೆಟ್ಟಿ ಒಂದು ವಾರದ ಒಳಗೆ ಗೃಹ ಇಲಾಖೆ ಕಾರ್ಯದರ್ಶಿಗೆ ಮನವಿ ಸಲ್ಲಿಸಬೇಕು. ಈ ಮನವಿಯನ್ನು ಕಾರ್ಯದರ್ಶಿ 15 ದಿನಗಳ ಒಳಗೆ ವಿಲೇವಾರಿ ಮಾಡಿ ಸೂಕ್ತ ಆದೇಶ ಹೊರಡಿಸಬೇಕು. ಈ ಹಂತದಲ್ಲಿ ಸೆಷನ್ಸ್ ನ್ಯಾಯಾಧೀಶರು ಪ್ರಕರಣದ ವಿಚಾರಣೆ ನಡೆಸಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಒಂದು ವೇಳೆ ಅರ್ಜಿದಾರರು ಗೃಹ ಇಲಾಖೆ ಕಾರ್ಯದರ್ಶಿಗೆ ಮನವಿ ನೀಡದೇ ಇದ್ದಲ್ಲಿ ವಿಚಾರಣೆ ಎಂದಿನಂತೆ ಮುಂದುವರಿಯಲಿ ಎಂದೂ ಆದೇಶದಲ್ಲಿ ವಿವರಿಸಲಾಗಿದೆ. ಅರ್ಜಿದಾರರ ಪರ ಎಂ.ಅರುಣ್ ಶ್ಯಾಮ್ ಹಾಜರಿದ್ದರು.
ಪ್ರಕರಣವೇನು: ಉದ್ಯಮಿ ಭಾಸ್ಕರ್‌ಶೆಟ್ಟಿ 2016ರ ಜುಲೈ 28ರಂದು ಉಡುಪಿಯ ಇಂದ್ರಾಳಿಯಲ್ಲಿರುವ ತಮ್ಮ ಮನೆಯಿಂದ ನಾಪತ್ತೆಯಾಗಿದ್ದರು. ಎಂಟು ದಿನಗಳ ಬಳಿಕ ಮಣಿಪಾಲ ಪೊಲೀಸರು ಅವರ ಪತ್ನಿ ಮತ್ತು ಮಗನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದರು. ಈ ಸಂದರ್ಭದಲ್ಲಿ ಭಾಸ್ಕರ್‌ಶೆಟ್ಟಿ ಕೊಲೆ ವಿಚಾರ ಬಹಿರಂಗವಾಗಿದೆ. ಈ ಕೊಲೆಗೆ ಇವರು ಸಂಚು ರೂಪಿಸಿದ್ದಾರೆ ಎಂಬ ಆರೋಪವನ್ನು ರಾಜೇಶ್ವರಿ ಶೆಟ್ಟಿ ಎದುರಿಸುತ್ತಿದ್ದಾರೆ.







