ಭಾರತ ನಿರಾಶ್ರಿತರ ರಾಜಧಾನಿಯಾಗಬಾರದು: ರೊಹಿಂಗ್ಯಾ ಪ್ರಕರಣದಲ್ಲಿ ಕೇಂದ್ರದ ಹೇಳಿಕೆ

ಹೊಸದಿಲ್ಲಿ, ಜ.31: ಭಾರತವು ಜಾಗತಿಕ ನಿರಾಶ್ರಿತರ ರಾಜಧಾನಿಯಾಗಲು ತಾನು ಬಯಸುವುದಿಲ್ಲ ಎಂದು ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ರೊಹಿಂಗ್ಯಾ ನಿರಾಶ್ರಿತರ ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈ ಹೇಳಿಕೆ ನೀಡಿದ್ದಾರೆ.
ಗಡಿ ಭದ್ರತಾ ಪಡೆಯವರು ಮೆಣಸಿನ ಪುಡಿ ಎರಚಿ ಹಾಗೂ ‘ಸ್ಟನ್ ಗ್ರೆನೇಡ್’ (ಭಾರೀ ಸದ್ದು ಹಾಗೂ ಮಿಂಚಿನಂತಹ ಬೆಳಕಿನೊಂದಿಗೆ ಸ್ಪೋಟಿಸುವ ಆದರೆ ಯಾವುದೇ ಹಾನಿ ಎಸಗದ ಸಿಡಿಗುಂಡು) ಬಳಸಿ ತಮ್ಮ ಸಹವರ್ತಿಗಳನ್ನು ಹಿಂದಕ್ಕೆ ಅಟ್ಟಿದ್ದಾರೆ ಎಂದು ಇಬ್ಬರು ರೊಹಿಂಗ್ಯಾ ನಿರಾಶ್ರಿತರು ಮಾಡಿರುವ ಆರೋಪಕ್ಕೆ ಅವರು ಪ್ರತಿಕ್ರಿಯೆ ನೀಡಿದರು.
ರೊಹಿಂಗ್ಯಾ ನಿರಾಶ್ರಿತರನ್ನು ಗುರುತಿಸಿ ಅವರನ್ನು ಮ್ಯಾನ್ಮಾರ್‌ಗೆ ಗಡೀಪಾರು ಮಾಡುವ ಕೇಂದ್ರ ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ಇಬ್ಬರು ರೊಹಿಂಗ್ಯಾ ನಿರಾಶ್ರಿತರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ನ ನ್ಯಾಯಪೀಠ ವಿಚಾರಣೆ ನಡೆಸಿತು.
ಕೇಂದ್ರ ಸರಕಾರದ ನಿರ್ಧಾರ ಭಾರತದ ಅಂತಾರಾಷ್ಟ್ರೀಯ ಹಾಗೂ ಮಾನವೀಯ ಬದ್ಧತೆಗೆ ವಿರುದ್ಧವಾಗಿದೆ ಎಂದು ಅರ್ಜಿದಾರರ ಪರ ವಕೀಲರಾಗಿದ್ದ ಪ್ರಶಾಂತ್ ಭೂಷಣ್ ನ್ಯಾಯಪೀಠಕ್ಕೆ ತಿಳಿಸಿದರು. ಅರ್ಜಿದಾರರ ಪರ ಎರಡನೇ ವಕೀಲರಾಗಿದ್ದ ಅಶ್ವಿನಿ ಕುಮಾರ್ , ಒಬ್ಬ ವ್ಯಕ್ತಿಯ ಜೀವಿಸುವ ಹಕ್ಕನ್ನು ನಿರಾಕರಿಸಲಾಗದು. ರೊಹಿಂಗ್ಯಾ ನಿರಾಶ್ರಿತರನ್ನು ಸಾವಿನ ದವಡೆಗೆ ನೂಕುವುದು ಸರಿಯಲ್ಲ ಎಂದು ಹೇಳಿದರು.
ಆದರೆ ಹೀಗೆ ಮಾಡಿದರೆ ವಿಶ್ವದ ಎಲ್ಲಾ ದೇಶದ ಜನರು ಭಾರತದೊಳಗೆ ಬಂದು ಸೇರಬಹುದು. ಭಾರತವು ವಿಶ್ವದೆಲ್ಲೆಡೆಯ ನಿರಾಶ್ರಿತರ ರಾಜಧಾನಿಯಾಗಬಹುದು ಎಂದು ಹೇಳಿದ ಹೆಚ್ಚುವರಿ ಸಾಲಿಸಿಟರ್ ಜನರಲ್, ಈ ವಿಷಯದಲ್ಲಿ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸುವಂತಿಲ್ಲ . ಅಲ್ಲದೆ ಅರ್ಜಿದಾರರ ಆರೋಪಕ್ಕೆ ಈಗ ಉತ್ತರಿಸುವ ಅಗತ್ಯ ಕಂಡುಬರುವುದಿಲ್ಲ ಎಂದು ಹೇಳಿದರು.







