ಗ್ವಾಂಟಾನಾಮೊ ಕಾರಾಗೃಹ ಮುಚ್ಚದಿರಲು ಟ್ರಂಪ್ ನಿರ್ಧಾರ

ವಾಶಿಂಗ್ಟನ್,ಜ.31: ಶಂಕಿತ ಉಗ್ರರು ಹಾಗೂ ‘ಶತ್ರು’ ಕೈದಿಗಳ ಚಿತ್ರ ಹಿಂಸೆಗಾಗಿ ಕುಖ್ಯಾತವಾದ ಕ್ಯೂಬಾದ ಗ್ವಾಂಟಾನಾಮೊ ಕೊಲ್ಲಿಯಲ್ಲಿರುವ ಅಮೆರಿಕ ಸೇನೆಯ ಕಾರಾಗೃಹವನ್ನು ತೆರೆದಿಡುವ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಸಹಿ ಹಾಕಿದ್ದಾರೆ. ಟ್ರಂಪ್ ಅವರ ಪೂರ್ವಾಧಿಕಾರಿ ಬರಾಕ್ ಒಬಾಮಾ ಗ್ವಾಂಟಾನಾಮೊ ಜೈಲನ್ನು ಮುಚ್ಚುಗಡೆಗೊಳಿಸಲು ವಿಫಲ ಪ್ರಯತ್ನ ನಡೆಸಿದ್ದರು.
ಕೈದಿಗಳನ್ನು ಅಮಾನವೀಯವಾಗಿ ನಡೆಸಿಕೊಂಡ ಘಟನೆಗಳಿಂದಾಗಿ ಗ್ವಾಂಟಾನಾಮೊ ಸೇನಾಕಾರಾಗೃಹವು ವ್ಯಾಪಕವಾಗಿ ಟೀಕೆಗೊಳಗಾಗಿತ್ತು.
‘‘ ನಾಗರಿಕ ಆಸ್ಪತ್ರೆಗಳಲ್ಲಿ ಬಾಂಬ್‌ಗಳನ್ನು ಇರಿಸುವಂತಹ ಕೃತ್ಯಗಳನ್ನು ಎಸಗುವ ಭಯೋತ್ಪಾದಕರನ್ನು ಸಾಧ್ಯವಾದಲ್ಲಿ ನಿರ್ಮೂಲಗೊಳಿಸಬೇಕು.ಅಗತ್ಯಬಿದ್ದಲ್ಲಿ ಅವರನ್ನು ಬಂಧಿಸಿ, ವಿಚಾರಣೆಗೊಳಪಡಿಸಲು ನಾವು ಶಕ್ತರಾಗಿರಬೇಕು’’ ಎಂದು ಟ್ರಂಪ್ ಹೇಳಿದರು.
ಬುಧವಾರ ವಾಶಿಂಗ್ಟನ್‌ನಲ್ಲಿ ತನ್ನ ಒಕ್ಕೂಟ ಭಾಷಣದಲ್ಲಿ ಅವರು ಗ್ವಾಂಟಾನಾಮೊ ಕಾರಾಗೃಹವನ್ನು ತೆರೆದಿಡುವ ತನ್ನ ನಿರ್ಧಾರವನ್ನು ಪ್ರಕಟಿಸಿದರು.
‘‘ಇಲ್ಲಿ ಒಂದು ವಿಚಾರ ಸ್ಪಷ್ಟವಾಗಿದೆ. ಅಮೆರಿಕವು ಈ ಹಿಂದೆ ಮೂರ್ಖತನದಿಂದ ಹಲವರು ಅಪಾಯಕಾರಿ ಉಗ್ರರನ್ನು ಬಂಧಮುಕ್ತಗೊಳಿಸಿತ್ತು. ಆದರೆ ಐಸಿಸ್ ನಾಯಕ ಅಲ್ ಬಗ್ದಾದಿ ಸೇರಿದಂತೆ ಅವರನ್ನು ಮತ್ತೆ ಯುದ್ಧ ಕಣದಲ್ಲಿ ಸಂಧಿಸಬೇಕಾಯಿತು’’ ಎಂದು ಟ್ರಂಪ್ ತನ್ನ ಭಾಷಣದಲ್ಲಿ ತಿಳಿಸಿದರು.
9/11ರ ಭಯೋತ್ಪಾದಕ ದಾಳಿ ಘಟನೆಯ ಬಳಿಕ ಅಮೆರಿಕವು ಬಂಧಿತ ಶಂಕಿತ ಭಯೋತ್ಪಾದಕರನ್ನು ಗ್ವಾಂಟಾನಾಮೊ ಜೈಲಿನಲ್ಲಿ ಬಂಧನದಲ್ಲಿರಿಸಿತ್ತು. ಆದರೆ ಪ್ರಸ್ತುತ ಅಲ್ಲಿ ಕೇವಲ 41 ಕೈದಿಗಳನ್ನು ಇರಿಸಲಾಗಿದೆ.







