ಉತ್ತರ ಅಫ್ಘಾನ್‌ನಲ್ಲಿ ಪ್ರಬಲ ಭೂಕಂಪ

ಕಾಬೂಲ್,ಜ.31: ಉತ್ತರ ಅಫ್ಘಾನಿಸ್ತಾನದಲ್ಲಿ ಬುಧವಾರ ಪ್ರಬಲ ಭೂಕಂಪ ಸಂಭವಿಸಿದ್ದು, ನೆರೆಯ ರಾಷ್ಟ್ರಗಳಾದ ಭಾರತ ಹಾಗೂ ಪಾಕಿಸ್ತಾನಗಳಲ್ಲೂ ಭೂಮಿ ನಡುಗಿದ ಅನುಭವವಾಗಿದೆ. ಉತ್ತರ ಅಫ್ಘಾನಿಸ್ತಾನದ ಹಿಂದೂಕುಶ್ ಪರ್ವತಪ್ರಾಂತದ ತಜಿಕಿಸ್ತಾನ ಗಡಿಯಲ್ಲಿ ಮಧ್ಯಾಹ್ನ 12:37ರ ವೇಳೆಗೆ ನೆಲದಿಂದ 191 ಕಿ.ಮೀ. ಆಳದಲ್ಲಿ ಭೂಕಂಪದ ಕೇಂದ್ರಬಿಂದುವಿತ್ತೆಂದು ಅಮೆರಿಕದ ಭೂಗೋಳ ಸರ್ವೇಕ್ಷಣಾ ಸಂಸ್ಥೆ ವರದಿ ಮಾಡಿದೆ.
ಭೂಮಿ ಕಂಪಿಸಿದ ಅನುಭವವಾಗುತ್ತಿದ್ದಂತೆಯೇ ರಾಜಧಾನಿ ಕಾಬೂಲ್ ಸೇರಿದಂತೆ ಅಫ್ಘಾನಿಸ್ತಾನದ ವಿವಿಧೆಡೆ ಭಯಗ್ರಸ್ತರಾದ ನಾಗರಿಕರು ಮನೆ ಹಾಗೂ ಅಂಗಡಿಕಟ್ಟಡಗಳಿಂದ ಹೊರಗೋಡಿ ಬಂದರು. ಅಫ್ಘಾನಿಸ್ತಾನದಲ್ಲಿ ಈತನಕ ಯಾವುದೇ ಸಾವುನೋವಿನ ಪ್ರಕರಣ ವರದಿಯಾಗಿಲ್ಲವೆಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನದ ಗಡಿಪ್ರದೇಶಗಳಲ್ಲೂ ಭೂಮಿಕಂಪಿಸಿದ್ದು, ಇಸ್ಲಾಮಾಬಾದ್, ಪೇಶಾವರ ಹಾಗೂ ಲಾಹೋರ್‌ಗಳಲ್ಲಿ ಮುನ್ನೆಚ್ಚರಿಕೆಯಾಗಿ ಮನೆಗಳು, ಕಚೇರಿಗಳು ಹಾಗೂ ಶಾಲೆಗಳಿಂದ ಜನರನ್ನು ತೆರವುಗೊಳಿಸಲಾಯಿತೆಂದು ಮೂಲಗಳು ತಿಳಿಸಿವೆ.
ಭೂಕಂಪನದ ಸಂದರ್ಭದಲ್ಲಿ ಪಾಕಿಸ್ತಾನದ ಕ್ವೆಟ್ಟಾ ನಗರದಲ್ಲಿ ಮನೆಯ ಚಾವಣಿಯೊಂದು ಕುಸಿದು ಓರ್ವ ಬಾಲಕಿ ಮೃತಪಟ್ಟಿದ್ದಾಳೆ. ಕ್ವೆಟ್ಟಾ ಪ್ರದೇಶದಲ್ಲಿ ಭೂಕಂಪದಿಂದಾಗಿ ಹಲವಾರು ಮನೆಗಳು, ಕಟ್ಟಡಗಳಿಗೆ ಹಾನಿಯಾಗಿದ್ದು 12ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆಂದು ಉಪ ಆಯುಕ್ತ ಶಬೀರ್ ಮೆಂಗಾಲ್ ತಿಳಿಸಿದ್ದಾರೆ.







