ಶಿಕ್ಷಣ ಅಜ್ಞಾನವನ್ನು ಹೋಗಲಾಡಿಸುತ್ತದೆ: ಬಸವರಾಜ್ ಚೇಂಗಟಿ

ಚಿಕ್ಕಮಗಳೂರು, ಜ.31:ಶಿಕ್ಷಣವು ವಿದ್ಯಾರ್ಥಿಗಳನ್ನು ಅಜ್ಞಾನದಿಂದ ಜ್ಞಾನದೆಡೆಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜ್ ಚೇಂಗಟಿ ತಿಳಿಸಿದರು.
ಅವರು ಬುಧವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ವಕೀಲರ ಸಂಘ ಹಾಗೂ ಆರೋಗ್ಯ ಇಲಾಖೆ, ಸರ್ಕಾರಿ ಪಿಯು ಕಾಲೇಜು (ಪ್ರೌಢಶಾಲಾ ವಿಭಾಗ) ಚಿಕ್ಕಮಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ಇಂದು ಸರ್ಕಾರಿ ಪಿಯು ಕಾಲೇಜು (ಪ್ರೌಢಶಾಲಾ ವಿಭಾಗ) ಆವರಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸ್ವಚ್ಚತಾ ದಿನದ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೀಪವು ಕತ್ತಲೆಯಿಂದ ಬೆಳಕಿನಡೆಗೆ ಕೊಂಡೊಯ್ಯುವಂತೆ ಶಿಕ್ಷಣವು ಅಜ್ಞಾನದಿಂದ ಜ್ಞಾನದೆಡೆಗೆ ಕೊಂಡೊಯ್ಯುತ್ತದೆ ಎಂದ ಅವರು ಶಿಕ್ಷಣದಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಾಗುವುದಲ್ಲದೇ ಆರ್ಥಿಕವಾಗಿ ಸಬಲರಾಗಿ, ಸ್ವಾವಲಂಭಿ ಜೀವನ ನಡೆಸಲು ಸಾಧ್ಯ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವುದರಿಂದ ಆರೋಗ್ಯವಂತ ಸಮಾಜ ಕಾಣಲು ಸಾಧ್ಯವಾಗುತ್ತದೆ. ಸ್ವಚ್ಚತೆಯನ್ನು ಕೇವಲ ಒಂದು ದಿನದ ಕಾರ್ಯಕ್ರಮಕ್ಕಾಗಿ ಮೀಸಲಿಡದೇ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಮೈಗೂಡಿಸಿಕೊಳ್ಳಬೇಕು ಎಂದರು.
ಮಕ್ಕಳಿಗೆ ವಯಸ್ಕರಿಗಿಂತ ಹೆಚ್ಚು ರಕ್ಷಣಾ ಹಕ್ಕುಗಳನ್ನು ನಮ್ಮ ಸಂವಿಧಾನದಿಂದ ನೀಡಲಾಗಿದ್ದು ಅವುಗಳನ್ನು ಎಲ್ಲಾ ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ಬಾಲ್ಯ ವಿವಾಹ ಹಾಗೂ ಬಯಲು ಶೌಚ ಇವೆರಡು ಸಾಮಾಜಿಕ ಪಿಡುಗಾಗಿದ್ದು ಅವುಗಳನ್ನು ಹೋಗಲಾಡಿಸಲು ನಾವೆಲ್ಲರೂ ಪಣತೊಡಬೇಕು ಎಂದು ಹೇಳಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ.ಟಿ. ದುಷ್ಯಂತ್ ಮಾತನಾಡಿ ಆರೋಗ್ಯವೇ ಭಾಗ್ಯ ಎಂದು ವಿದ್ಯಾರ್ಥಿಗಳು ತಿಳಿಯುವ ಮೂಲಕ ಆರೋಗ್ಯಕ್ಕೆ ಹೆಚ್ಚಿನ ಒತ್ತು ಕೊಡಬೇಕು, ಆರೋಗ್ಯವಂತರಾಗಿದ್ದಾಗ ಮಾತ್ರ ಪ್ರತಿಯೊಬ್ಬರೂ ಏನಾದರೂ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.
ನಮ್ಮ ಕೆಲಸಗಳನ್ನು ನಾವೇ ಮಾಡಿಕೊಳ್ಳುವ ಮೂಲಕ, ಸ್ವಚ್ಚತೆಗೆ ಆಧ್ಯತೆ ನೀಡಬೇಕು, ನಮ್ಮ ಮನೆ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಚವಾಗಿ ಇರಿಸಿಕೊಳ್ಳುವ ಮೂಲಕ ಇತರರಿಗೂ ಮಾದರಿಯಾಗಬೇಕು ಎಂದರು.
ಆರೋಗ್ಯ ಇಲಾಖೆಯ ಡಾ. ಮಹಂತೇಶ್ ಸ್ವಚ್ಚತೆಯ ಮಹತ್ವ ಮತ್ತು ಬಯಲು ಶೌಚದ ದುಷ್ಪರಿಣಾಮಗಳ ಬಗ್ಗೆ ಉಪನ್ಯಾಸ ನೀಡಿ ಸ್ವಚ್ಚತೆ ಎಂಬುದು ಆಂತರಿಕ ಮತ್ತು ಬಹಿರಂಗ ಶುದ್ದಿಯಾಗಿದ್ದು ನಾವು ಮೊದಲು ಆಂತರಿಕ ಶುದ್ದಿಗೆ ಮಹತ್ವ ನೀಡಿದಾಗ ನಮ್ಮಿಂದ ಆಗುವ ತಪ್ಪುಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದರು.
ಮಲೆನಾಡು ಪ್ರದೇಶದಲ್ಲಿ ಚಿಕೂನ್‍ಗುನ್ಯ, ಡೆಂಗ್ಯೂ, ಮಲೇರಿಯಾ ಪ್ರಕರಣಗಳು ಇತ್ತೀಚೆಗೆ ಕಂಡು ಬರುತ್ತಿದ್ದು, ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ರೀತಿಯ ಕಲುಷಿತ ನೀರು ನಿಲ್ಲದಂತೆ ತಡೆಗಟ್ಟುವಲ್ಲಿ ನಾವು ಯಶಸ್ವಿಯಾದರೆ ಇಂತಹ ರೋಗಗಳಿಂದ ದೂರವಿರಬಹುದೆಂದರು.
ವಕೀಲರಾದ ಕೆ.ಎನ್ ಚಂದ್ರಶೇಖರ್ ಬಾಲ್ಯ ವಿವಾಹ ನಿಷೇಧ ಕಾಯಿದೆ ಮತ್ತು ಬಾಲ ಕಾರ್ಮಿಕ ನಿಷೇಧ ಕಾಯಿದೆಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ, ಜಿಲ್ಲೆಯಲ್ಲಿ ಅನೇಕ ಬಾಲ್ಯ ವಿವಾಹ ಪ್ರಕರಣದ ಆರೋಪಗಳು ಕೇಳಿಬರುತ್ತಿದ್ದು, ಇಂತಹ ಪ್ರಕರಣಗಳು ಕಂಡುಬಂದಲ್ಲಿ 1098 ಸಂಖ್ಯೆಗೆ ದೂರು ನೀಡಬಹುದಾಗಿದೆ ಎಂದರು.
ಬಾಲ ಕಾರ್ಮಿಕ ಕಾಯಿದೆ ಪ್ರಕಾರ 14 ವರ್ಷದೊಳಗಿನ ಮಕ್ಕಳನ್ನು ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಅಪರಾಧವಾಗಿದೆ, ಇಂತಹ ಪ್ರಕರಣಗಳು ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿಗೆ ಕರೆ ಮಾಡುವ ಮೂಲಕ ದೂರನ್ನು ನೀಡಬಹುದಾಗಿದ್ದು, ಈ ಸೇವೆಯು ದಿನದ 24 ಗಂಟೆಗಳ ಕಾಲವೂ ಲಭ್ಯವಿರುತ್ತದೆ ಎಂದರು.
ಸರ್ಕಾರಿ ಪಿಯು ಕಾಲೇಜಿನ (ಪ್ರೌಢಶಾಲಾ ವಿಭಾಗ) ಉಪ ಪ್ರಾಂಶುಪಾಲ ಡಿ.ಎಸ್.ಪುಟ್ಟಸ್ವಾಮಿಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಸಿ.ಎಂ.ರಾಜೇಶ್, ಸರ್ಕಾರಿ ಪಿಯು ಕಾಲೇಜಿನ (ಪ್ರೌಢಶಾಲಾ ವಿಭಾಗ) ಎಸ್.ಡಿ.ಎಂ.ಸಿ ಅಧ್ಯಕ್ಷ ಶಂಕರಯ್ಯ ಎಸ್ ಹಿರೇಮಠ್, ಸದಸ್ಯ ಶಬೀರ್ ಅಹಮ್ಮದ್ ಉಪಸ್ಥಿತರಿದ್ದರು.







