ಮಡಿಕೇರಿ; ಎಸ್‍ಸಿ,ಎಸ್‍ಟಿ ವಿಶೇಷ ಘಟಕ ಯೋಜನೆ: ಪ್ರಗತಿ ಸಾಧಿಸಲು ಜಿಲ್ಲಾಧಿಕಾರಿ ಸೂಚನೆ

ಮಡಿಕೇರಿ,ಜ.31:ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿಶೇಷ ಘಟಕ ಯೋಜನಾ ಕಾರ್ಯಕ್ರಮಗಳ ಪ್ರಗತಿ ಸಾಧಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಉಪ ಯೋಜನೆ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಸತಿ ಯೋಜನೆಗಳು, ಮಧ್ಯಾಹ್ನದ ಬಿಸಿಯೂಟ, ಅಕ್ಷರ ದಾಸೋಹ, ಮತ್ತಿತರ ಕಾರ್ಯಕ್ರಮ ಹಾಗೂ ಕಾಮಗಾರಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಂತೆ ಸ್ಪಷ್ಟ ನಿರ್ದೇಶನ ನೀಡಿದರು.
ಮಧ್ಯಾಹ್ನದ ಬಿಸಿ ಊಟ ಹಾಗೂ ಕ್ಷೀರಭಾಗ್ಯ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುವಂತೆ ಜಿಲ್ಲಾಧಿಕಾರಿ ಸಲಹೆ ಮಾಡಿದರು.
ಜಿ.ಪಂ.ಸಿಇಓ ಪ್ರಶಾಂತ್ ಕುಮಾರ್ ಮಿಶ್ರ ಅವರು ಮಧ್ಯಾಹ್ನ ಬಿಸಿ ಊಟ, ಅಕ್ಷರ ದಾಸೋಹ ಸಂಬಂಧಿಸಿದಂತೆ ತಮ್ಮ ಇಲಾಖೆಯ ಜವಾಬ್ದಾರಿಗಳನ್ನು ನಿರ್ವಹಿಸುವಂತೆ ಸಲಹೆ ಮಾಡಿದರು.
ಲೋಕಪಯೋಗಿ ಕಾರ್ಯಕ್ರಮಗಳು ಸರಿಯಾಗಿ ಅನುಷ್ಠಾನವಾಗದಿರುವುದಕ್ಕೆ ಜಿಲ್ಲಾಧಿಕಾರಿ ಅವರು ತೀವ್ರ ಅತೃಪ್ತಿ ವ್ಯಕ್ತಪಡಿಸಿದರು. ಕಾರ್ಮಿಕ ಇಲಾಖೆಯ ಬಾಲ ಕಾರ್ಮಿಕರನ್ನು ಪತ್ತೆಯಚ್ಚುವುದು ಈ ಸಂಬಂಧ ಸಲಹೆ ಮಾಡಿದರು.
ಆಶ್ರಮ ಶಾಲೆಯಲ್ಲಿನ ಲೋಪದೋಷಗಳನ್ನು ಸರಿಪಡಿಸುವಂತೆ ಹಾಗೂ ಆಶ್ರಮ ಶಾಲೆಗಳ ಕಟ್ಟಡ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಅವರು, ಐಟಿಡಿಪಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯ ಗಡಿಭಾಗದಲ್ಲಿ ಇರುವಂತಹ ಆಶ್ರಮ ಶಾಲೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಿ ಮಕ್ಕಳಿಗೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಾಕೀತು ಮಾಡಿದರು. ಜಿಲ್ಲೆಯಲ್ಲಿ ಮಾತೃಪೂರ್ಣ ಯೋಜನೆಯನ್ನು ಸಮರ್ಪಕವಾಗಿ ಹಾಗೂ ಪೂರ್ಣ ಪ್ರಮಾಣದಲ್ಲಿ ಜಾರಿ ಯಾಗದಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಅವರು ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಟಾನಗೊಳಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಿಗೆ ನಿರ್ದೇಶನ ನೀಡಿದರು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕಾಗಿ ಮಿಸಲಿಟ್ಟಿರುವ ಅನುದಾನವು ಮಾರ್ಚ್ 15 ರೊಳಗೆ ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡು ಆರ್ಥಿಕ ಪ್ರಗತಿಯನ್ನು ಸಾಧಿಸಬೇಕೆಂದು ಸೂಚನೆ ನೀಡಿದರು. ಕೈಗಾರಿಕಾ ಇಲಾಖೆಯಲ್ಲಿನ ಪ್ರಗತಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಜಿಲ್ಲಾ ಕೈಗಾರಿಕಾ ಇಲಾಖಾ ಅಧಿಕಾರಿಗಳೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಫೆಬ್ರವರಿ ಅಂತ್ಯದೊಳಗೆ ತರಬೇರಿ ಕಾರ್ಯಕ್ರಮಗಳು ಪೂರ್ಣಗೊಳಿಸುತ್ತೇವೆ ಎಂದು ಮಾಹಿತಿ ನೀಡಿದರು.
ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಹಣಾ ಅಧಿಕಾರಿಗಳಿಂದ ಮಾಹಿತಿ ಪಡೆದ ಜಿ.ಪಂ.ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರ ಅವರು ಕೆಲಸ ವಿಳಂಭದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಬಾಕಿ ಉಳಿದಿರುವ ಕಾಮಗಾರಿಗಳು ಫೆಬ್ರವರಿ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿ.ಪಂ.ಉಪ ಕಾರ್ಯದರ್ಶಿ ಸಿದ್ದಲಿಂಗಮೂರ್ತಿ, ಯೋಜನಾಧಿಕಾರಿ ನಂದ, ಸಹಾಯಕ ಕಾರ್ಯದರ್ಶಿ ಶ್ರೀಕಂಠಮೂರ್ತಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಕೆ.ರಾಮಪ್ಪ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಮಾಯಾದೇವಿ ಗಲಗಲಿ, ಐಟಿಡಿಪಿ ಇಲಾಖೆ ಅಧಿಕಾರಿ ಪ್ರಕಾಶ್, ಆಹಾರ ಇಲಾಖೆಯ ಉಪನಿರ್ದೇಶಕರಾದ ಪುಟ್ಟಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಮಲ್ಲೇಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ರಾಜೇಶ್, ಜಿ.ಪಂ.ಎಂಜಿನಿಯರ್ ರಾಜಕುಮಾರ್ ರೆಡ್ಡಿ, ಪೌರಾಯುಕ್ತರಾದ ಬಿ.ಶುಭಾ, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಸಿ.ಜಗನ್ನಾಥ್, ಕಾರ್ಮಿಕ ಇಲಾಖೆ ಅಧಿಕಾರಿ ರಾಮಕೃಷ್ಣ, ಜಿಲ್ಲಾ ಆಯುಷ್ ಅಧಿಕಾರಿ ರಾಮಕೃಷ್ಣ, ತಹಶೀಲ್ದಾರ್ ಕುಸುಮ, ತಾ.ಪಂ.ಇಒಗಳಾದ ಜೀವನ್ ಕುಮಾರ್, ಚಂದ್ರಶೇಖರ್, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳಾದ ಚೆನ್ನಬಸವಯ್ಯ, ಮಂಜುನಾಥ್, ಜವಳಿ ಇಲಾಖೆ ಅಧಿಕಾರಿ ಗುರುಸ್ವಾಮಿ, ಕೈಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಶಬೀರ್ ಬಾಷ ಅವರು ತಮ್ಮ ಇಲಾಖೆ ವ್ಯಾಪ್ತಿಯ ಹಲವು ಮಾಹಿತಿ ನೀಡಿದರು.







