ಅಮೆರಿಕದ ಆರ್ಥಿಕ ಶರಣಾಗತಿಯ ಯುಗಾಂತ್ಯ
ಸ್ಟೇಟ್ ಆಫ್ ಯೂನಿಯನ್ ಭಾಷಣದಲ್ಲಿ ಟ್ರಂಪ್

ವಾಶಿಂಗ್ಟನ್,ಜ.31: ಚೀನಾದಂತಹ ದೇಶಗಳಿಗೆ ಬುಧವಾರ ಕಠಿಣ ಎಚ್ಚರಿಕೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ‘‘ಅಮೆರಿಕದ ಆರ್ಥಿಕ ಶರಣಾಗತಿಯ ಯುಗ ಅಂತ್ಯಗೊಂಡಿದ್ದು, ಅದೀಗ ನ್ಯಾಯಯುತವಾದ ಹಾಗೂ ಕೊಡುಕೊಳ್ಳುವಿಕೆಯ ವ್ಯಾಪಾರಕ್ಕೆ ಬದ್ಧವಾದ ದೇಶಗಳ ಜೊತೆ ಹೊಸ ಆರ್ಥಿಕ ಒಪ್ಪಂದಗಳನ್ನು ಏರ್ಪಡಿಸಿಕೊಳ್ಳಲಿದೆ’’ ಎಂದು ಘೋಷಿಸಿದ್ದಾರೆ.
ಅಮೆರಿಕ ಕಾಂಗ್ರೆಸ್‌ನಲ್ಲಿ ತನ್ನ ಚೊಚ್ಚಲ ‘ಸ್ಟೇಟ್ ಆಫ್ ಯೂನಿಯನ್’ ಭಾಷಣ ಮಾಡಿದ ಟ್ರಂಪ್, ಕೆಟ್ಟ ಸಾಲ ಒಪ್ಪಂದಗಳನ್ನು ಸರಿಪಡಿಸಲು ಹಾಗೂ ಅಮೆರಿಕದ ಉದ್ಯೋಗಿಗಳ ಹಿತರಕ್ಷಿಸುವಂತಹ ನೂತನ ಕಾನೂನುಗಳನ್ನು ಜಾರಿಗೊಳಿಸಲು ತನ್ನ ಆಡಳಿತವು ಶ್ರಮಿಸಲಿದೆಯೆಂದು ತಿಳಿಸಿದ್ದಾರೆ. ತಾನು ಪ್ರಕಟಿಸಿರುವ ನೂತನ ಆರ್ಥಿಕ ನೀತಿಗಳು ದೇಶದ ಜನತೆಯಲ್ಲಿ ಹೊಸ ಆತ್ಮವಿಶ್ವಾಸವನ್ನು ಮೂಡಿಸಿರುವುದಾಗಿ ಅವರು ತಿಳಿಸಿದ್ದಾರೆ. ಉತ್ಪಾದನಾ ರಂಗವೊಂದರಲ್ಲೇ 2 ಲಕ್ಷ ಉದ್ಯೋಗಗಳು ಸೇರಿದಂತೆ ಅಧ್ಯಕ್ಷೀಯ ಚುನಾವಣೆಯ ಬಳಿಕ ನಾವು 20.40 ಲಕ್ಷ ನೂತನ ಉದ್ಯೋಗಿಗಳನ್ನು ಸೃಷ್ಟಿಸಿದ್ದೇವೆ. ವೇತನಏರಿಕೆಯಲ್ಲಿ ಹಲವು ವರ್ಷಗಳ ಸ್ಥಗಿತತೆಯ ಬಳಿಕ, ಕೊನೆಗೂ ವೇತನ ಏರಿಕೆಯಾಗತೊಡಗಿರುವುದನ್ನು ನಾವು ಕಾಣುತ್ತಿದ್ದೇವೆ ಎಂದು ಟ್ರಂಪ್ ತಿಳಿಸಿದರು. ದೇಶದಲ್ಲಿ ನಿರುದ್ಯೋಗವು ಕಳೆದ 45 ವರ್ಷಗಳಲ್ಲೇ ಅತ್ಯಂತ ಕೆಳಮಟ್ಟಕ್ಕೆ ಕುಸಿದಿದೆ. ಆಫ್ರಿಕನ್-ಅಮೆರಿಕನ್ ಸಂಜಾತರು ಹಾಗೂ ಹಿಸ್ಪಾನಿಕ್ ಜನಾಂಗೀಯರ ನಿರುದ್ಯೋಗವು ಕೂಡಾ ಇತಿಹಾಸದಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕಿಳಿದಿದೆಯೆಂದು ಟ್ರಂಪ್ ಹೇಳಿದರು.
ಸಣ್ಣ ಉದ್ಯಮ ರಂಗದಲ್ಲಿಯೂ ಸಾರ್ವಕಾಲಿಕವಾದ ಆತ್ಮವಿಶ್ವಾಸ ಮೂಡಿದ್ದು, ಶೇರು ಮಾರುಕಟ್ಟೆಯ 8 ಸಹಸ್ರಕೋಟಿ ಡಾಲರ್ ವೌಲ್ಯವನ್ನು ಪಡೆಯುವ ಮೂಲಕ ದಾಖಲೆ ನಿರ್ಮಿಸಿದೆ. ತನ್ನ ಆಡಳಿತವು ಜಾರಿಗೆ ತಂದ ತೆರಿಗೆ ಕಡಿತ ಹಾಗೂ ಆರ್ಥಿಕ ಸುಧಾರಣೆಗಳನ್ನು ಭಾಷಣದಲ್ಲಿ ಪ್ರಸ್ತಾಪಿಸಿದ ಟ್ರಂಪ್ ಅವರು, ವ್ಯಾಪಕವಾದ ತೆರಿಗೆ ಕಡಿತ ಕ್ರಮಗಳಿಂದಾಗಿ ಮಧ್ಯಮ ವರ್ಗ ಹಾಗೂ ಸಣ್ಣ ಉದ್ಯಮಗಳು ನೆಮ್ಮದಿಯ ನಿಟ್ಟುಸಿರೆಳೆಯುವಂತಾಗಿದೆಯೆಂದರು.
ಅರ್ಹತೆ ಆಧಾರಿತ ವಲಸೆ ನೀತಿಗೆ ಆದ್ಯತೆ
ಅರ್ಹತೆ ಆಧಾರಿತ ವಲಸೆ ವ್ಯವಸ್ಥೆಗೆ ಒತ್ತು ನೀಡುವ ತನ್ನ ನಿರ್ಧಾರವನ್ನು ಅಧ್ಯಕ್ಷ ಟ್ರಂಪ್ ತನ್ನ ಸ್ಟೇಟ್ ಆಫ್ ಯೂನಿಯನ್ ಭಾಷಣದಲ್ಲಿ ಘೋಷಿಸಿದ್ದಾರೆ. ಈ ನೀತಿಯ ನ್ವಯ ಕೇವಲ ಕೌಶಲ್ಯಭರಿತ ಜನರಿಗೆ ದೇಶಕ್ಕೆ ವಲಸೆ ಬರಲು ಸಾಧ್ಯವಾಗಲಿದೆ. ಅಮೆರಿಕದ ಈ ಪ್ರಸ್ತಾಪವು ಭಾರತದಂತಹ ದೇಶಗಳ ವೃತ್ತಿಪರ ತಂತ್ರಜ್ಞರಿಗೆ ಪ್ರಯೋಜನಕಾರಿ ಯಾಗಲಿದೆಯೆಂದು ಭಾವಿಸಲಾಗಿದೆ.
ಸುಮಾರು 80 ನಿಮಿಷಗಳ ಕಾಲ ಅಮೆರಿಕ ಕಾಂಗ್ರೆಸ್‌ನ್ನುದ್ದೇಶಿಸಿ ಭಾಷಣ ಮಾಡಿದ ಟ್ರಂಪ್, ಆರ್ಹತೆ ಆಧಾರಿತ ವಲಸೆ ವ್ಯವಸ್ಥೆಯೆಡೆಗೆ ಸಾಗುವ ಸಮಯ ಆರಂಭಗೊಂಡಿದೆ. ಪರಿಣತಿಯಿರುವ, ದುಡಿಯಲು ಬಯಸುವ, ನಮ್ಮ ಸಮಾಜಕ್ಕೆ ಕೊಡುಗೆ ನೀಡಬಲ್ಲ ಹಾಗೂ ನಮ್ಮ ದೇಶವನ್ನು ಪ್ರೀತಿಸುವ ಹಾಗೂ ಗೌರವಿಸುವವರಿಗೆ ಅವಕಾಶ ನೀಡಬೇಕಾಗಿದೆಯೆಂದು ಟ್ರಂಪ್ ಹೇಳಿದ್ದಾರೆ.







