ಇಂಡೋನೇಶ್ಯಾ: ಅಚೆ ಪ್ರಾಂತದಲ್ಲಿ ಮುಸ್ಲಿಂ ಗಗನಪರಿಚಾರಿಕೆಯರಿಗೆ ಶಿರವಸ್ತ್ರ ಧಾರಣೆ ಕಡ್ಡಾಯ

ಬಂದಾ ಅಚೆ,ಜ.31: ಇಂಡೊನೇಶ್ಯದ ಅಚೆ ಪ್ರಾಂತದ ಅಧಿಕಾರಿಗಳು, ಮುಸ್ಲಿಂ ಗಗನಪರಿಚಾರಿಕೆಯರಿಗೆ ಕರ್ತವ್ಯ ನಿರ್ವಹಣೆಯ ಸಂದರ್ಭದಲ್ಲಿ ಶಿರವಸ್ತ್ರ ಧರಿಸುವುದನ್ನು ಕಡ್ಡಾಯಗೊಳಿಸಿದ್ದಾರೆ.
ಅಚೆ ಪ್ರಾಂತವು ಮುಸ್ಲಿಂ ರಾಷ್ಟ್ರವಾದ ಇಂಡೊನೇಶ್ಯದಲ್ಲಿ ಇಸ್ಲಾಮಿಕ್ ಕಾನೂನನ್ನು ಜಾರಿಗೊಳಿಸಿದ ಏಕೈಕ ಪ್ರಾಂತವಾಗಿದೆ. ಇಂಡೊನೇಶ್ಯದ ಉಳಿದ ಪ್ರಾಂತಗಳ ಸರಕಾರವು ಮುಸ್ಲಿಂ ಗಗನಪರಿಚಾರಿಕೆಯರಿಗೆ ಶಿರವಸ್ತ್ರ ಧಾರಣೆಯನ್ನು ಕಡ್ಡಾಯಗೊಳಿಸಿರಲಿಲ್ಲ. 2001ರಲ್ಲಿ ಇಂಡೊನೇಶ್ಯದ ಕೇಂದ್ರ ಸರಕಾರದ ಜೊತೆ ಏರ್ಪಡಿಸಿಕೊಂಡ ಒಪ್ಪಂದದ ಅಂಗವಾಗಿ ಅಚೆ ಪ್ರಾಂತ ಸರಕಾರಕ್ಕೆ ವಿಶೇಷ ಸ್ವಾಯತ್ತೆಯನ್ನು ನೀಡಲಾಗಿತ್ತು. ಇಂದು ಇಂಡೊನೇಶ್ಯದ ವಿಮಾನಯಾನ ಸಂಸ್ಥೆ ಗುರುಡ ಇಂಡೊನೇಶ್ಯ, ಮಲೇಶ್ಯದ ಏರ್‌ಏಶ್ಯ ಹಾಗೂ ಫೈರ್‌ಫ್ಲೈ ಸೇರಿದಂತೆ ವಿವಿಧ ವಿಮಾನಯಾನ ಸಂಸ್ಥೆಗಳಿಗೆ, ಅಚೆ ಪ್ರಾಂತ ಸರಕಾರ ಕಳುಹಿಸಿದ ಸುತ್ತೋಲೆಯಲ್ಲಿ ಮುಸ್ಲಿಂ ಗಗನಪರಿಚಾರಿಕೆಯರಿಗೆ ಶಿರವಸ್ತ್ರ ಧಾರಣೆಯನ್ನು ಕಡ್ಡಾಯಗೊಳಿಸುವ ಆದೇಶವನ್ನು ತಿಳಿಸಿದೆ. ಆದರೆ ಈ ಕಾನೂನು ಮುಸ್ಲಿಮೇತರ ಸಿಬ್ಬಂದಿಗೆ ಅನ್ವಯವಾಗುವುದಿಲ್ಲವೆಂದು ಅದು ಹೇಳಿದೆ.





