ಮದ್ದೂರು : ಕನ್ನಡ ಬಾರದ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಪ್ರತಿಭಟನೆ

ಮದ್ದೂರು, ಜ.31: ಕನ್ನಡ ಬಾರದ ವಿಜಯಾ ಬ್ಯಾಂಕ್ ಅಧಿಕಾರಿ, ಸಿಬ್ಬಂದಿ ವಿರುದ್ಧ ತೆಂಗು ಬೆಳೆಗಾರರ ಸಂಘ ಸೇರಿದಂತೆ ವಿವಿಧ ಜನಪರ ಸಂಘಟನೆಗಳ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದರು.
ತೆಂಗು ಬೆಳೆಗಾರರ ಸಂಘದ ಅಧ್ಯಕ್ಷ ಲಕ್ಷ್ಮಣ್ ಚನ್ನಸಂದ್ರ ಮಾತನಾಡಿ, ವಿಜಯಾ ಬ್ಯಾಂಕಿನಲ್ಲಿ ಕನ್ನಡ ಬಾರದ ಅಧಿಕಾರಿ, ಸಿಬ್ಬಂದಿಗಳೇ ಹೆಚ್ಚಿದ್ದಾರೆ. ಇದರಿಂದಾಗಿ ಗ್ರಾಮೀಣ ಗ್ರಾಹಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ತಾಲೂಕು ಅಧ್ಯಕ್ಷೆ ಪ್ರಿಯಾಂಕ ಅಪ್ಪು ಪಿ.ಗೌಡ ಮಾತಾನಾಡಿ, ಪ್ರತಿನಿತ್ಯ ರೈತರು ಅನಕ್ಷರಸ್ಥರು, ಮುಗ್ಧರು ಬ್ಯಾಂಕಿನಲ್ಲಿ ವ್ಯವಹರಿಸಲು ಆಗಮಿಸುತ್ತಾರೆ. ಬ್ಯಾಂಕಿನ ಅಧಿಕಾರಿಗಳು ಕನ್ನಡ ಬಾರದಿದ್ದಲ್ಲಿ ಕಡ್ಡಾಯವಾಗಿ ಕನ್ನಡವನ್ನು ಕಲಿಯಬೇಕು. ಅಲ್ಲಿಯವರೆಗೆ ಕನ್ನಡ ಬರುವವರು ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಬ್ಯಾಂಕ್ ವ್ಯವಸ್ಥಾಪಕ ಮೋಹನ್ ನಾಯಕ್, ಬ್ಯಾಂಕಿನ ಎಲ್ಲ ಅಧಿಕಾರಿಗಳಿಗೆ ಕನ್ನಡ ಬರುತ್ತದೆ. ಆದರೆ, ಮಾತನಾಡುವಾಗ ಸ್ವಲ್ಪ ವ್ಯತ್ಯಾಸವಾಗುತ್ತಿದೆ. ಇನ್ನುಮುಂದೆ ತಪ್ಪು ಆಗದಂತೆ ಕ್ರಮವಹಿಸಲಾಗುವುದು ಭರವಸೆ ನೀಡಿದರು.
ತಿಪ್ಪೂರು ರಾಜೇಶ್, ಮಲ್ಲರಾಜು, ಮಿಲ್ಟ್ರಿ ಕುಮಾರ್, ಸಿದ್ದೇಗೌಡ, ಶಿವರಾಮು, ಸುಂದರಮ್ಮ, ಝಮೀರ್ ಅಹಮದ್, ತಮ್ಮಣ್ಣಗೌಡ, ಶಂಕರೇಗೌಡ, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.





