ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಫೆ.15ರ ವರೆಗೆ ಕಾಲಾವಕಾಶ
ಒಂದು ಲಕ್ಷ ಬಹುಮಹಡಿ ವಸತಿ ಯೋಜನೆ
ಬೆಂಗಳೂರು, ಜ.31: ಮುಖ್ಯಮಂತ್ರಿಗಳ ಬೆಂಗಳೂರು ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಯಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆಯ ಅವಧಿಯನ್ನು ಅಂತಿಮವಾಗಿ ಫೆ.15ರವರೆಗೆ ವಿಸ್ತರಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಈ ವಸತಿ ಯೋಜನೆಯಡಿ ಆನ್‌ಲೈನ್ ಅರ್ಜಿ ಸಲ್ಲಿಕೆಯ ಅವಧಿಯನ್ನು ಜ.5ರವರೆಗೆ ನಿಗದಿಪಡಿಸಲಾಗಿತ್ತು. ಸಾರ್ವಜನಿಕರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆಯ ಅವಧಿಯನ್ನು ವಿಸ್ತರಿಸಲು ಕೋರಿ ಸಾಕಷ್ಟು ಮನವಿಗಳು ಬಂದ ಹಿನ್ನೆಲೆಯಲ್ಲಿ ಸರಕಾರವು ಅರ್ಜಿ ಸಲ್ಲಿಕೆಯ ಅವಧಿಯನ್ನು ಜ.5 ರಿಂದ ಜ.20ರವರೆಗೆ ಹಾಗೂ ಜ.21ರಿಂದ ಜ.31ರವರೆಗೆ ಎರಡು ಬಾರಿ ವಿಸ್ತರಿಸಿತು. ಇದುವರೊ 33,500 ಅರ್ಜಿಗಳು ಸಲ್ಲಿಕೆಯಾಗಿವೆ.
ಆನ್‌ಲೈನ್ ಅರ್ಜಿ ಸಲ್ಲಿಸಲು ಬೇಕಾಗಿರುವ ಅಗತ್ಯ ದಾಖಲೆಗಳಾದ ಆದಾಯ ಹಾಗೂ ವಾಸಸ್ಥಳದ ದೃಢೀಕರಣ ಪತ್ರವನ್ನು ಪಡೆಯಲು ಅಟಲ್ ಜನಸ್ನೇಹಿ ಕೇಂದ್ರಗಳಿಂದ ವಿಳಂಬವಾಗುತ್ತಿರುವುದರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆಯ ಅವಧಿಯನ್ನು ವಿಸ್ತರಿಸಲು ಕೋರಿ ಸಾರ್ವಜನಿಕರಿಂದ ಸಾಕಷ್ಟು ಮನವಿಗಳು ಬಂದಿರುವ ಹಿನ್ನೆಲೆಯಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಕೆಯ ಅವಧಿಯನ್ನು ಅಂತಿಮವಾಗಿ ಸರಕಾರವು ಫೆ.15ರವರೆಗೆ ವಿಸ್ತರಿಸಿದೆ.
ಈಗಾಗಲೆ ಅರ್ಜಿ ಸಲ್ಲಿಕೆಯ ಅವಧಿಯನ್ನು 3 ಬಾರಿ ವಿಸ್ತರಿಸುವುದರಿಂದ ಮತ್ತೊಮ್ಮೆ ಅರ್ಜಿ ಸಲ್ಲಿಕೆಯ ಅವಧಿಯನ್ನು ವಿಸ್ತರಿಸುವುದಿಲ್ಲ. ಆದುದರಿಂದ, ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಅರ್ಜಿ ಸಲ್ಲಿಸುವಂತೆ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಪ್ರಕಟನೆ ತಿಳಿಸಿದೆ.







