ಶರಾವತಿ ಸಂತ್ರಸ್ತರಿಗೆ ಪುನರ್ವಸತಿ, ಹಕ್ಕುಪತ್ರ ವಿತರಣೆ ಕಾರ್ಯ ತ್ವರಿತಗೊಳಿಸಿ: ಕಾಗೋಡು ತಿಮ್ಮಪ್ಪ

ಶಿವಮೊಗ್ಗ, ಫೆ.1: ಶರಾವತಿ ಮುಳುಗಡೆ ಸಂತ್ರಸ್ತರಿಗೆ ಪುನರ್ವಸತಿಗಾಗಿ ಸರ್ಕಾರ ಈಗಾಗಲೆ ಬಿಡುಗಡೆ ಮಾಡಿರುವ 8324 ಎಕ್ರೆ ಭೂಮಿ ಪೈಕಿ 6303 ಎಕ್ರೆ ಭೂಮಿಯನ್ನು ಡಿನೋಟಿಫೈ ಮಾಡಲಾಗಿದ್ದು, ಇನ್ನುಳಿದ ಭೂಮಿ ಡಿನೋಟಿಫೈ ಮಾಡಲು ಪರಿಷ್ಕರಣಾ ಆದೇಶಕ್ಕಾಗಿ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.
ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಕುರಿತು ಪರಿಶೀಲನಾ ಸಭೆ ನಡೆಸಿದರು.
ಬಿಡುಗಡೆಯಾದ ಭೂಮಿಯ ಪೈಕಿ 1322 ಎಕ್ರೆ ಜಿಪಿಎಸ್ ಮ್ಯಾಪಿಂಗ್ ಸರಿಯಾಗಿ ಆಗದಿರುವ ಕಾರಣ ಹಕ್ಕುಪತ್ರ ನೀಡಲು ಸಾಧ್ಯವಾಗಿರುವುದಿಲ್ಲ.
ಇದಕ್ಕಾಗಿ ಈಗಾಗಲೇ ಜಂಟಿ ಸರ್ವೆ ಕಾರ್ಯ ನಡೆಸಲಾಗಿದ್ದು, ಸರ್ಕಾರಕ್ಕೆ ಪ್ರಸ್ತಾವನೆಯನ್ನು ಆದಷ್ಟು ಬೇಗನೆ ಸಲ್ಲಿಸಬೇಕು. ಈಗಾಗಲೆ 3121 ಎಕ್ರೆ ಪ್ರದೇಶದಲ್ಲಿ 1502 ಫಲಾನುಭವಿಗಳಿಗೆ ಹಕ್ಕುಪತ್ರವನ್ನು ವಿತರಿಸಲಾಗಿದೆ. ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡಿರುವ 1031ಎಕ್ರೆ ಪ್ರದೇಶದಲ್ಲಿ ಸುಮಾರು 500ಜನ ಫಲಾನುಭವಿಗಳಿಗೆ ಒಂದು ವಾರದ ಒಳಗಾಗಿ ಹಕ್ಕುಪತ್ರ ನೀಡುವಂತೆ ಸಚಿವರು ಸೂಚನೆ ನೀಡಿದರು.
ಈಗಾಗಲೇ ಬಿಡುಗಡೆಯಾಗಿರುವ ಜಮೀನು ಡಿನೋಟಿಫೈ ಮಾಡಲು ಕ್ರಮ ಕೈಗೊಳ್ಳಬೇಕು. ಡಿನೋಟಿಫೈ ಆಗಿರುವ ಪ್ರಕರಣಗಳಲ್ಲಿ ಫಲಾನುಭವಿಗಳಿಗೆ ಕಾಲಮಿತಿಯ ಒಳಗಾಗಿ ಹಕ್ಕುಪತ್ರ ವಿತರಿಸಿ ಸಾಗುವಳಿ ಪತ್ರ ನೀಡಲು ಆದ್ಯತೆ ನೀಡಬೇಕು. ಎಲ್ಲಾ ಪ್ರಕ್ರಿಯೆಗಳನ್ನು ಫೆಬ್ರವರಿ ಅಂತ್ಯದ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಅವರು ಹೇಳಿದರು.
ಶರಾವತಿ ಮುಳುಗಡೆ ಸಂತ್ರಸ್ತರ ಪುನರ್ವಸತಿ ಕುರಿತಾದ 31ಪ್ರಕರಣಗಳಲ್ಲಿ 2341ಎಕ್ರೆ ಪ್ರದೇಶ ಡಿನೋಟಿಫೈ ಮಾಡುವ ಪ್ರಸ್ತಾವನೆಗಳು ಸರ್ಕಾರ ಹಂತದಲ್ಲಿದ್ದು, ಅವುಗಳನ್ನು ಆದಷ್ಟು ಬೇಗನೇ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ತೀರ್ಥಹಳ್ಳಿ ತಾಲೂಕಿನ ಕೊಂಬಿನಕೈಯಲ್ಲಿ ಪುನರ್ವಸತಿಗಾಗಿ 342 ಎಕ್ರೆ ಭೂಮಿ ಬಿಡುಗಡೆಯಾಗಿದ್ದು, ಡಿನೋಟಿಫೈ ಪ್ರಕ್ರಿಯೆ ಪೂರ್ಣಗೊಳಿಸಿ ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ತಿಳಿಸಿದರು.
ಅರಣ್ಯ ಹಕ್ಕು ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು. ಈ ಕುರಿತು ಅನಗತ್ಯ ಕಾನೂನು ತೊಡಕುಗಳಿಗೆ ಅವಕಾಶ ನೀಡದೆ ಅರ್ಜಿಗಳನ್ನು ವಿಲೇವಾರಿ ಮಾಡಿ ಅರ್ಹ ಫಲಾನುಭವಿಗಳಿಗೆ ಭೂಮಿ ಹಕ್ಕು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಶಾಸಕ ಕಿಮ್ಮನೆ ರತ್ನಾಕರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಕೇಶ್ ಕುಮಾರ್, ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.







