ಉಡುಪಿ: ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ

ಉಡುಪಿ, ಫೆ.1: ಉಡುಪಿ ಜಿಲ್ಲಾ ವಿಶ್ವಕರ್ಮ ಎಜ್ಯುಕೇಶನಲ್ ಟ್ರಸ್ಟ್ ವತಿ ಯಿಂದ ಜಿಲ್ಲೆಯ 167 ವೃತ್ತಿಪರ ಹಾಗೂ ಸ್ನಾತಕೋತ್ತರ ಬಡ ವಿದ್ಯಾರ್ಥಿಗಳಿಗೆ 6,24,500ರೂ. ಮೊತ್ತದ ವಿದ್ಯಾರ್ಥಿ ವೇತನವನ್ನು ಇತ್ತೀಚೆಗೆ ಉಡುಪಿ ಕುಂಜಿ ಬೆಟ್ಟಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ವಿತರಿಸಲಾಯಿತು.
ಕಾರ್ಯಕ್ರಮವನ್ನು ಕತಾರ್‌ನ ಉದ್ಯಮಿ ಕೆ.ವಿಶ್ವನಾಥ ರಾವ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಟ್ರಸ್ಟ್‌ನ ಅಧ್ಯಕ್ಷ ಡಾ.ದಾಸಾಚಾರ್ಯರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಚಿವ ಪ್ರಮೋದ್ ಮಧ್ವರಾಜ್, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್.ನಂದ ಕುಮಾರ್ ಶುಭ ಹಾರೈಸಿದರು.
ಕೊರಗ ಸಮುದಾಯದ ಸಮಾಜಕಾರ್ಯದ ವಿದ್ಯಾರ್ಥಿ ಸುದರ್ಶನ್ ಕೋಟ ಹಾಗೂ ವಿಕಲಚೇತನ ಅರ್ಥಶಾಸ್ತ್ರದ ಸ್ನಾತಕೋತ್ತರ ವಿದ್ಯಾರ್ಥಿ ಸುಕೇಶ್ ಮೂಲ್ಯ ನಿಟ್ಟೆ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಇದೇ ಸಂದರ್ಭ ದಲ್ಲಿ 2016-17ನೇ ಸಾಲಿನಲ್ಲಿ ಮಂಗಳೂರು ವಿವಿ ರ್ಯಾಂಕ್ ವಿಜೇತ ಶ್ರುತಿ ಕೋಟೇಶ್ವರ, ಸ್ವಾತ್ವಿಕಾ ಆಚಾರ್ಯ ಕಳತ್ತೂರು, ದಿವ್ಯಾ ಕಂಬಳಟ್ಟ ಅವರನ್ನು ಅಭಿನಂದಿಸಲಾಯಿತು.
ಡಾಕ್ಟರೇಟ್ ಪದವಿ ಪಡೆದ ಡಾ.ಸಂತೋಷ್ ಆಚಾರ್ಯ ಕುಂಜಾಲು, ಡಾ.ಪರಮೇಶ್ವರ ಆಚಾರ್ಯ ಧರ್ಮಸ್ಥಳ ಹಾಗೂ ಡಾ.ನವೀನ್ ಸಾಲಿಗ್ರಾಮ ಅವರನ್ನು ಸನ್ಮಾನಿಸಲಾಯಿತು. ಟ್ರಸ್ಟ್‌ನ ಮಾಜಿ ಅಧ್ಯಕ್ಷ ಕಡೆಕಾರು ಶ್ರೀನಿವಾಸ ಆಚಾರ್ಯ ಸಂಸ್ಮರಣೆಯನ್ನು ಮಹಾಬಲೇಶ್ವರ ಆಚಾರ್ಯ ನಡೆಸಿದರು.
ಆರ್‌ವಿಎಸ್ ಸಂಘದ ಅಧ್ಯಕ್ಷ ವಾಸುದೇವ ಆಚಾರ್ಯ, ಅಖಿಲ ಭಾರತ ವಿಶ್ವಕರ್ಮ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಕೃಷ್ಣವೇಣಿ, ವಿಶ್ವಕರ್ಮ ಒಕ್ಕೂಟದ ಗೌರವಾಧ್ಯಕ್ಷ ಯೋಗೀಶ ಆಚಾರ್ಯ, ವಿಶ್ವಕರ್ಮ ಯುವ ಸಂಘಟನೆಯ ಕಾರ್ಯದರ್ಶಿ ಹರೀಶ್ ಆಚಾರ್ಯ, ಮಹಿಳಾ ಮಂಡಳಿ ಅಧ್ಯಕ್ಷೆ ವಂದನಾ ಯೋಗೀಶ್, ವಿಶ್ವಬ್ರಾಹ್ಮಣ ಯುವಕ ಸೇವಾದಳದ ಅಧ್ಯಕ್ಷ ಸುರೇಶ್ ಆಚಾರ್ಯ ಉಪಸ್ಥಿತರಿದ್ದರು.
ಕಾರ್ಯದರ್ಶಿ ವಸಂತ ಆಚಾರ್ಯ ಕಾರ್ಕಳ ಸ್ವಾಗತಿಸಿದರು. ಉಪಾಧ್ಯಕ್ಷ ಚಂದ್ರಾಯ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಭಾಸ್ಕರ ಆಚಾರ್ಯ ವಂದಿಸಿದರು. ಡಾ. ಪ್ರತಿಮಾ ಜಯಪ್ರಕಾಶ್ ಹಾಗೂ ಉಷಾ ಭಾಸ್ಕರ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.







