ಬಜೆಟ್ 2018: ಆಹಾರ,ರಸಗೊಬ್ಬರ ಮತ್ತು ತೈಲಗಳ ಮೇಲಿನ ಸಬ್ಸಿಡಿ ಏರಿಕೆ

ಹೊಸದಿಲ್ಲಿ,ಫೆ.1: 2018-19ನೇ ಸಾಲಿಗೆ ಆಹಾರ, ರಸಗೊಬ್ಬರ ಮತ್ತು ಪೆಟ್ರೋಲಿಯಂ ಮೇಲಿನ ಸಬ್ಸಿಡಿ ಮೊತ್ತ ಶೇ.15ರಷ್ಟು ಏರಿಕೆಯಾಗಿ 2.64 ಲ.ಕೋ.ರೂ.ಗಳಿಗೆ ತಲುಪಲಿದೆ ಎಂದು ಅಂದಾಜಿಸಲಾಗಿದೆ.
ಮುಂದಿನ ಹಣಕಾಸು ವರ್ಷಕ್ಕೆ ಇವುಗಳ ಮೇಲಿನ ಸಹಾಯಧನದ ಮೊತ್ತ 2,64,335.65 ಕೋ.ರೂ.ಗೆ ಹೆಚ್ಚುವ ನಿರೀಕ್ಷೆಯಿದೆ ಎಂದು ವಿತ್ತಸಚಿವ ಅರುಣ್ ಜೇಟ್ಲಿ ಅವರು ಗುರುವಾರ ಸಂಸತ್ತಿನಲ್ಲಿ ಬಜೆಟ್ ಭಾಷಣದಲ್ಲಿ ತಿಳಿಸಿದರು.
ಪರಿಷ್ಕೃತ ಮುಂಗಡಪತ್ರ ಅಂದಾಜುಗಳಂತೆ ಹಾಲಿ ಹಣಕಾಸು ವರ್ಷದಲ್ಲಿ ಸಬ್ಸಿಡಿ ಮೊತ್ತ 2,29,715.67 ಕೋ.ರೂ.ಗಳಿಗೆ ಹೆಚ್ಚಲಿದೆ.
ಸರಕಾರವು ಹಾಲಿ ಹಣಕಾಸು ವರ್ಷದ ಪರಿಷ್ಕೃತ ಅಂದಾಜುಗಳಲ್ಲಿನ 1,40,281.69 ಕೋ.ರೂ.ಗಳಿಗೆ ಬದಲಾಗಿ ಮುಂದಿನ ಹಣಕಾಸು ವರ್ಷಕ್ಕೆ 1,69,323 ಕೋ.ರೂ.ಗಳನ್ನು ಆಹಾರ ಸಬ್ಸಿಡಿಯನ್ನಾಗಿ ನಿಗದಿಗೊಳಿಸಿದೆ.
2018-19ನೇ ಸಾಲಿಗಾಗಿ ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು ಹಾಲಿ ಹಣಕಾಸು ವರ್ಷದ ಪರಿಷ್ಕೃತ ಅಂದಾಜು 64,973.5 ಕೋ.ರೂ.ಗಳಿಂದ 70,079.85 ಕೋ.ರೂ.ಗಳಿಗೆ ಹೆಚ್ಚಿಸಲಾಗಿದೆ. ಈ ಪೈಕಿ ಯೂರಿಯಾ ಕ್ಷೇತ್ರದ ಸಬ್ಸಿಡಿಯನ್ನು 42,721.7 ಕೋ.ರೂ.ಗಳಿಂದ 44,989.5 ಕೋ.ರೂ.ಗೆ ಏರಿಸಲಾಗಿದೆ. ಪೋಷಕಾಂಶ ಆಧಾರಿತ ಯೋಜನೆಯಡಿ ಫಾಸ್ಫೆಟಿಕ್ ಮತ್ತು ಪೊಟ್ಯಾಷಿಕ್ ರಸಗೊಬ್ಬರಗಳಿಗಾಗಿ ಸಬ್ಸಿಡಿ ಮೊತ್ತವನ್ನು ಹಾಲಿ ಹಣಕಾಸು ವರ್ಷದ 22,251.8 ಕೋ.ರೂ.ಗಳಿಂದ 25,090.35 ಕೋ.ರೂ.ಗಳಿಗೆ ಹೆಚ್ಚಿಸಲಾಗಿದೆ.
2018-19ನೇ ಸಾಲಿಗೆ ಪೆಟ್ರೋಲಿಯಂ ಸಬ್ಸಿಡಿಯನ್ನು ಹಾಲಿ ಹಣಕಾಸು ವರ್ಷದ ಅಂದಾಜು 24,460.48 ಕೋ.ರೂ.ಗಳಿಂದ 24,932.8 ಕೋ.ರೂ.ಗೆ ಏರಿಸಲಾಗಿದೆ. ಈ ಪೈಕಿ 20,377.80 ಕೋ.ರೂ.ಗಳನ್ನು ಎಲ್‌ಪಿಜಿ ಮತ್ತು 4,555 ಕೋ.ರೂ.ಗಳನ್ನು ಸೀಮೆಎಣ್ಣೆ ಮೇಲಿನ ಸಬ್ಸಿಡಿಯನ್ನಾಗಿ ನಿಗದಿಗೊಳಿಸಲಾಗಿದೆ.
2017-18ನೇ ಸಾಲಿನ ಪರಿಷ್ಕೃತ ಅಂದಾಜಿನಂತೆ ಎಲ್‌ಪಿಜಿ ಮತ್ತು ಸೀಮೆಎಣ್ಣೆ ಸಬ್ಸಿಡಿಗಳು ಅನುಕ್ರಮವಾಗಿ 15,656.33 ಕೋ.ರೂ. ಮತ್ತು 8,804.15 ಕೋ.ರೂ. ಗಳಾಗಿವೆ.