ಸಂತೋಷ್ ಕೊಲೆ ಪ್ರಕರಣ : ನಾಲ್ವರ ಬಂಧನ

ಮೃತ ಸಂತೋಷ್
ಬೆಂಗಳೂರು, ಫೆ.1: ಜೊತೆಯಲ್ಲಿದ್ದ ಸ್ನೇಹಿತನನ್ನೇ ಕೊಲೆಗೈದಿರುವ ಘಟನೆ ಇಲ್ಲಿನ ಜೆಸಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ.
ನಗರದ ರಾಮಸ್ವಾಮಿಪಾಳ್ಯ ವಾರ್ಡ್ನ ಸಂತೋಷ್(28) ಕೊಲೆಯಾದ ವ್ಯಕ್ತಿ ಎಂದು ಪೊಲೀಸರು ಗುರುತಿಸಿದ್ದು, ಈತ ಆಟೊ ಚಾಲಕನಾಗಿದ್ದ ಎಂದು ತಿಳಿದುಬಂದಿದೆ.
ಜೆಸಿ ನಗರ ಕಾಂಗ್ರೆಸ್ ಮುಖಂಡ ಖಾದರ್ಶರೀಫ್ ಪುತ್ರ ವಾಸೀಮ್(27) ಹಾಗೂ ಫಿಲಿಪ್ಸ್, ಉಮ್ಮರ್, ಇರ್ಫಾನ್ ಬಂಧಿತ ಆರೋಪಿಗಳೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆ ವಿವರ: ಬುಧವಾರ ಸಂಜೆ 7 ಗಂಟೆ ಸುಮಾರಿಗೆ ಜೆಸಿ ನಗರದ ಚಿನ್ನಪ್ಪ ಗಾರ್ಡನ್ ಬಳಿಯ ಖಾದರ್ ಬೇಕರಿ ಬಳಿ ಸಂತೋಷ್ನ ಮೇಲೆ ಸ್ಕ್ರೂ ಡೈವರ್ನಿಂದ ವಾಸೀಮ್ ಹಾಗೂ ಆತನ ಸ್ನೇಹಿತರು ದಾಳಿ ಮಾಡಿ ಪರಾರಿಯಾಗಿದ್ದಾರೆ. ಇದನ್ನು ಕಂಡ ಸ್ಥಳೀಯರು ಸಂತೋಷ್ನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ, ರಕ್ತಸ್ರಾವದಿಂದಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಕೊಲೆಗೆ ಗಾಂಜಾ ಸೇವನೆ, ಬ್ಯಾನರ್ ಕಟ್ಟುವ ವಿಷಯ ಹಾಗೂ ಕೋಮುದ್ವೇಷದ ಕಾರಣಗಳನ್ನಿಟ್ಟು ಆರೋಪಿಸಲಾಗುತ್ತಿದೆ. ಈ ಸಂಬಂಧ ಜೆಸಿ ನಗರ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಬಿಜೆಪಿ ಪ್ರತಿಭಟನೆ: ಕೊಲೆಯಾದ ಸಂತೋಷ್ ಅವರ ಮನೆಯ ಬಳಿ ಬಿಗುವಿನ ವಾತಾವರಣ ಉಂಟಾಗಿತ್ತು. ಸಂತೋಷ್ ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಮನೆಯ ಬಳಿ ತಂದಾಗ ಬಿಜೆಪಿ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿ ಗೃಹ ಸಚಿವ ರಾಮಲಿಂಗಾರೆಡ್ಡಿ, ನಗರ ಪೊಲೀಸ್ ಆಯುಕ್ತರು ಇಲ್ಲವೇ ಸಚಿವರೊಬ್ಬರು ಸ್ಥಳಕ್ಕಾಗಮಿಸುವಂತೆ ಪಟ್ಟುಹಿಡಿದರು.
ಗುರುವಾರ ಬೆಳಗ್ಗೆ 11:30ಕ್ಕೆ ಆ್ಯಂಬುಲೆನ್ಸ್ನಲ್ಲಿ ತಂದ ಮೃತದೇಹವನ್ನು ಮನೆಯ ಬಳಿ ಇಳಿಸದೆ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಸ್ಥಳಕ್ಕೆ ಸಚಿವರು ಆಗಮಿಸಿ ಸೂಕ್ತ ಪರಿಹಾರ ಘೋಷಿಸುವವರೆಗೂ ಮೃತದೇಹದ ಅಂತ್ಯಕ್ರಿಯೆ ನಡೆಸುವುದಿಲ್ಲ ಎಂದು ಹೇಳಿದರು.
ಬಿಜೆಪಿ ಮುಖಂಡರಾದ ಆರ್. ಅಶೋಕ್, ಕಟ್ಟಾಸುಬ್ರಮಣ್ಯ ನಾಯ್ಡು, ಶಾಸಕ ನಾರಾಯಣಸ್ವಾಮಿ ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಮೃತರ ಅಂತಿಮ ದರ್ಶನ ಪಡೆದು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಬಿಗುವಿನ ಪರಿಸ್ಥಿತಿ: ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಉಂಟಾಗಿರುವ ಬಿಗುವಿನ ಪರಿಸ್ಥಿತಿ ನಿಭಾಯಿಸಲು ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿದೆ. ರಾಜ್ಯ ಮೀಸಲು ಪಡೆಯ 4 ತುಕಡಿಗಳು ಸೇರಿದಂತೆ ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.
ಪ್ರಕರಣ ಸಿಸಿಬಿಗೆ
ಸಂತೋಷ್ ಕೊಲೆ ಪ್ರಕರಣದ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಹೆಚ್ಚಿನ ತನಿಖೆಗಾಗಿ ಸಿಸಿಬಿಗೆ ವಹಿಸಲಾಗುವುದು. ಇನ್ನು ಕುಟುಂಬಸ್ಥರು ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದು, ಈ ಎಲ್ಲ ವಿಚಾರಗಳನ್ನು ಗೃಹ ಸಚಿವ ಹಾಗೂ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲಾಗುವುದು.
-ಟಿ.ಸುನೀಲ್ ಕುಮಾರ್, ನಗರ ಪೊಲೀಸ್ ಆಯುಕ್ತಎನ್ಐಎಗೆ ಒಪ್ಪಿಸಿ
ಬಿಜೆಪಿ ಕಾರ್ಯಕರ್ತ ಸಂತೋಷ್ ಕೊಲೆ ಪ್ರಕರಣವನ್ನು ಎನ್ಐಎಗೆ(ರಾಷ್ಟ್ರೀಯ ತನಿಖಾ ದಳ) ವಹಿಸಬೇಕು. ರಾಜ್ಯದಲ್ಲಿ ಪದೇ ಪದೆ ಬಿಜೆಪಿ ಕಾರ್ಯಕರ್ತರ ಹತ್ಯೆಗಳು ನಡೆಯುತ್ತಿವೆ. ಇದು ವೈಯಕ್ತಿಕ ಕಾರಣಕ್ಕೆ ಕೊಲೆ, ಗಾಂಜಾ ವಿಚಾರಕ್ಕೆ ಕೊಲೆ ಎಂದು ಬಿಂಬಿಸಲು ಪೊಲೀಸರು ಮತ್ತು ಸರಕಾರ ಯತ್ನಿಸುತ್ತಿದೆ. ನಾಳೆ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.
-ಆರ್.ಅಶೋಕ್, ಬಿಜೆಪಿ ಮುಖಂಡ







