ಕೊಲೆ ಪ್ರಕರಣವನ್ನು ಅಪರಾಧವಾಗಿಯೇ ನೋಡಿ: ಬಿಜೆಪಿ ಮುಖಂಡರಿಗೆ ರಾಮಲಿಂಗಾರೆಡ್ಡಿ ಸಲಹೆ

ಬೆಂಗಳೂರು, ಫೆ. 1: ‘ಬಿಜೆಪಿ ಕಾರ್ಯಕರ್ತರಿಂದ ಕೊಲೆಯಾದ ದಲಿತ ಮತ್ತು ಹಿಂದೂಗಳ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುವ ದೊಡ್ಡಮನಸ್ಸು ನಿಮಗಿಲ್ಲವೇ? ಕೊಲೆಯನ್ನು ಅಪರಾಧವಾಗಿಯೇ ನೋಡಿ’ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಬಿಜೆಪಿ ಮುಖಂಡರಿಗೆ ತಾಕೀತು ಮಾಡಿದ್ದಾರೆ.
ಗುರುವಾರ ಕೇಂದ್ರ ಸಚಿವ ಸದಾನಂದಗೌಡ ಅವರ ಟ್ವಿಟರ್ ಮೂಲಕ ಕೇಳಿದ ಪ್ರಶ್ನೆಗೆ ಟ್ವಿಟರ್ ಮೂಲಕವೇ ಪ್ರತಿಕ್ರಿಯೆ ನೀಡಿರುವ ರಾಮಲಿಂಗಾರೆಡ್ಡಿ, ಕೊಲೆಯನ್ನು ಅಪರಾಧವಾಗಿಯೇ ರಾಜ್ಯ ಸರಕಾರ ನೋಡಿದ ಕಾರಣಕ್ಕಾಗಿ ಬಹುತೇಕ ಎಲ್ಲ ಪ್ರಕರಣಗಳಲ್ಲಿಯೂ ಅಪರಾಧಿಗಳನ್ನು ಕಾರಾಗೃಹಕ್ಕೆ ಕಳುಹಿಸಿದೆ ಎಂದು ತಿರುಗೇಟು ನೀಡಿದ್ದಾರೆ.
ರಾಜ್ಯಕ್ಕೆ ಬಿಜೆಪಿಯ ಬೆಂಕಿ ಹಚ್ಚುವಂತಹ ನಾಯಕರು ಬೇಕೋ ಅಥವಾ ಬೆಂಕಿ ಆರಿಸುವ ನಾಯಕರು ಬೇಕೋ ಎಂಬುದನ್ನು ರಾಜ್ಯದ ಜನ ನಿರ್ಧರಿಸಲಿದ್ದಾರೆ. ರಾಜ್ಯದಲ್ಲಿ ಅಧಿಕಾರಕ್ಕೇರುವ ಹಗಲುಗನಸು ಕಾಣಬೇಡಿ ಎಂದು ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಕೇಂದ್ರ ಸಚಿವರಾದ ಸದಾನಂದ ಗೌಡ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಹೇಳಿಕೆಗಳನ್ನು ನೀಡುವುದನ್ನು ಖಯಾಲಿ ಮಾಡಿಕೊಂಡಿದ್ದಾರೆ. ರಾಜ್ಯ ಸರಕಾರದ ವಿರುದ್ಧ ‘ಹಿಂದೂ ಕಾರ್ಯಕರ್ತರ ಕೊಲೆ’ ಎಂದು ಸುಳ್ಳು ಹೇಳುವುದು ಹಾಸ್ಯಾಸ್ಪದ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ವಿಜಯಪುರದಲ್ಲಿ ದಲಿತ ಬಾಲಕಿಯ ಮೇಲಿನ ಅತ್ಯಾಚಾರ, ಕೊಲೆ, ಮೂಡಿಗೆರೆಯ ವಿದ್ಯಾರ್ಥಿನಿ ಧನ್ಯಶ್ರೀ ಸಾವಿಗೆ ಕಾರಣವಾಗಿದ್ದು ನಿಮ್ಮ ಪಕ್ಷದ ಕಾರ್ಯಕರ್ತರರಲ್ಲವೇ? ಎಂದು ಪ್ರಶ್ನಿಸಿದ ಅವರು, ಉಡುಪಿಯ ಪ್ರವೀಣ ಪೂಜಾರಿ ಕೊಲೆ, ಬಂಟ್ವಾಳದ ಹರೀಶ ಪೂಜಾರಿ ಕೊಲೆ ಪ್ರಕರಣದಲ್ಲಿ ಸಂಘಪರಿವಾರದವರು ಬಂಧನಕ್ಕೆ ಒಳಗಾಗಲಿಲ್ಲವೇ? ಎಂದು ತಿರುಗೇಟು ನೀಡಿದ್ದಾರೆ.
ದಕ್ಷಿಣ ಕನ್ನಡಕ್ಕೆ ಬೆಂಕಿ ಹಚ್ಚುವ ಹೇಳಿಕೆ ನೀಡಿ ಕಾರ್ತಿಕ್ ರಾಜ್ ಕೊಲೆ ಪ್ರಕರಣದ ತನಿಖೆಯನ್ನು ದಾರಿ ತಪ್ಪಿಸಲು ಪ್ರಯತ್ನಿಸಿದ್ದು, ನಿಮ್ಮ ಪಕ್ಷದ ಸಂಸದರಲ್ಲವೇ? ವಿನಾಯಕ ಬಾಳಿಗಾ ಸೇರಿದಂತೆ ಕೊಲೆಯಾದ ಹಲವು ಮಂದಿ ಹಿಂದೂಗಳಲ್ಲವೇ ಎಂದ ಅವರು, ಇವರೆಲ್ಲರ ತಂದೆ-ತಾಯಿಯರ ಶಾಪ ನಿಮ್ಮ ಪಕ್ಷಕ್ಕೆ ತಟ್ಟುವುದಿಲ್ಲವೇ ಎಂದು ಲೇವಡಿ ಮಾಡಿದ್ದಾರೆ.
‘ಯಾವುದೇ ಕೊಲೆ ಪ್ರಕರಣವಿರಲಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಲು ನಮ್ಮ ಪೊಲೀಸರು ಮತ್ತು ನಮ್ಮ ಸರಕಾರ ಸಶಕ್ತವಾಗಿದೆ. ರಾಜ್ಯದಲ್ಲಿ ಮತ್ತೊಮ್ಮೆ ಸಿಎಂ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವೇ ಅಧಿಕಾರಕ್ಕೆ ಬರಲಿದೆ’
-ರಾಮಲಿಂಗಾರೆಡ್ಡಿ, ಗೃಹ ಸಚಿವ







