ಶ್ರೀಕೃಷ್ಣ ಮಠದ ಪಾರ್ಕಿಂಗ್ ಅವ್ಯವಹಾರ ಆರೋಪ: ಉಸ್ತುವಾರಿ ವಜಾ

ಉಡುಪಿ, ಫೆ.1: ಉಡುಪಿ ಶ್ರೀಕೃಷ್ಣ ಮಠದ ಪಾರ್ಕಿಂಗ್ ವ್ಯವಸ್ಥೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಆರೋಪದ ಹಿನ್ನೆಲೆಯಲ್ಲಿ ಗುರುವಾರ ಪೇಜಾವರ ಶ್ರೀ ಹಾಗೂ ಪರ್ಯಾಯ ಪಲಿಮಾರು ಸ್ವಾಮೀಜಿ ಸಹಿತ ವಿವಿಧ ಮಠಾಧೀಶರುಗಳ ಉಪಸ್ಥಿತಿಯಲ್ಲಿ ಶ್ರೀಕೃಷ್ಣ ಮಠ ಪರಿಸರ ಸೇವಾ ಪ್ರತಿಷ್ಠಾನದ ಸಭೆ ಪೇಜಾವರ ಮಠದ ವಿಜಯಧ್ವಜ ಛತ್ರದಲ್ಲಿ ನಡೆಯಿತು.
ಸಭೆಯ ಬಳಿಕ ಮಾತನಾಡಿದ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ, ‘ಟ್ರಸ್ಟ್ ವತಿಯಿಂದ ಪಾರ್ಕಿಂಗ್ ಹಣ ಸಂಗ್ರಹ ಉಸ್ತುವಾರಿಯಾಗಿ ಉದಯ ಸುಬ್ರಹ್ಮಣ್ಯ ಅವರನ್ನು ನೇಮಕ ಮಾಡಲಾಗಿತ್ತು. ಅವರು ಒಂದೇ ರೀತಿಯ ನಂಬರ್ ಇರುವ ಎರಡು ರಿಸಿಪ್ಟ್ ಪುಸ್ತಕಗಳನ್ನು ಇಟ್ಟುಕೊಂಡು ಪಾರ್ಕಿಂಗ್ ಹಣ ಸಂಗ್ರಹಿಸಿ ಅವ್ಯವಹಾರ ನಡೆಸುತ್ತಿದ್ದಾರೆ ಎಂಬ ಆರೋಪವನ್ನು ಶಿರೂರು ಸ್ವಾಮೀಜಿ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಉದಯ ಅವರನ್ನು ಆ ಜವಾಬ್ದಾರಿಯಿಂದ ತೆಗೆದುಹಾಕಿದ್ದೇವೆ. ಅವರ ಬದಲು ಪಾರ್ಕಿಂಗ್ ಹಣ ಸಂಗ್ರಹದ ಜವಾಬ್ದಾರಿಯನ್ನು ಶಿರೂರು ಶ್ರೀಗಳಿಗೆ ವಹಿಸಿಕೊಡಲಾಗಿದೆಂದು ತಿಳಿಸಿದರು.
ಪಾರ್ಕಿಂಗ್ ಪ್ರದೇಶದಲ್ಲಿರುವ ವಿಷ್ಣುಮೂರ್ತಿ ಅವರ ಎರಡು ಅಂಗಡಿಗಳಿಗೆ ಮಠಾಧೀಶರ ವಿರೋಧ ಇರುವ ಹಿನ್ನೆಲೆಯಲ್ಲಿ ಅದನ್ನು ತೆರವುಗೊಳಿಸಲು ಆದೇಶ ನೀಡಲಾಗಿದೆ. ಅದೇ ರೀತಿ ಬೇರೆ ಅಂಗಡಿಗಳನ್ನು ಕೂಡ ತೆರವುಗೊಳಿಸಬೇಕು ಎಂಬುದಾಗಿ ಶಿರೂರು ಸ್ವಾಮೀಜಿಗಳ ಅಪೇಕ್ಷೆ. ಅದಕ್ಕೆ ನಾವು ಎಲ್ಲ ಒಪ್ಪಿಗೆ ಕೊಟ್ಟಿದ್ದೇವೆ ಎಂದರು.
ಕಳೆದ ಪರ್ಯಾಯ ಅವಧಿಯಲ್ಲಿ ಪಾರ್ಕಿಂಗ್ ವಿಚಾರದಲ್ಲಿ ಮಠಕ್ಕೆ ಯಾವುದೇ ನಷ್ಟ ಆಗಿಲ್ಲ. ಅದಕ್ಕಿಂತ ಹೆಚ್ಚಿನ ಪಾಲು ಹಣವನ್ನು ನಾವು ಟ್ರಸ್ಟ್‌ಗೆ ಕೊಟ್ಟಿದ್ದೇವೆ. 50 ಲಕ್ಷ ರೂ. ಯಾತ್ರಿ ನಿವಾಸಕ್ಕೆ ಮತ್ತು 2.5 ಕೋಟಿ ರೂ. ವೆಚ್ಚದ ಯಾತ್ರಿ ನಿವಾಸ ಕಟ್ಟಡವನ್ನು ಪಾರ್ಕಿಂಗ್ ಪ್ರದೇಶದಲ್ಲಿ ಮಾಡಿದ್ದೇವೆ. ಹಾಗಾಗಿ ಟ್ರಸ್ಟ್‌ಗೆ ನಮ್ಮಿಂದ ಯಾವುದೇ ರೀತಿಯ ಅನ್ಯಾಯ ಆಗಲಿ, ನಷ್ಟ ಆಗಲಿ ಆಗಿಲ್ಲ ಎಂದು ಪೇಜಾವರ ಸ್ವಾಮೀಜಿ ಸ್ಪಷ್ಟಪಡಿಸಿದರು.
‘ಇದು ಶ್ರೀ ಕೃಷ್ಣ ಮಠದ ಭಕ್ತರಿಗಾಗಿ ಮಾಡಿರುವ ಹೋರಾಟ. ಭಕ್ತರಿಗೆ ಯಾವುದೇ ತೊಂದರೆ ಆಗಬಾರದು ಎಂಬುದು ನಮ್ಮ ಉದ್ದೇಶ. ರಥಬೀದಿ ಹಾಗೂ ಕೃಷ್ಣ ಮಠದ ಪರಿಸರ ವಾಹನ ಮುಕ್ತ ಹಾಗೂ ವಾಣಿಜ್ಯ ಮುಕ್ತ ಆಗಬೇಕು. ಆದರೆ ಕೆಲವರು ಅದನ್ನು ಹಾಳು ಮಾಡುವ ಯತ್ನ ಮಾಡುತ್ತಿದ್ದಾರೆ. ಈ ಕುರಿತು ಪೇಜಾವರ ಶ್ರೀಗಳಿಗೆ ಎಲ್ಲ ರೀತಿಯ ಆಧಾರಗಳನ್ನು ನೀಡಿದ್ದೇನೆ. ಮುಂದೆ ಪಾರ್ಕಿಂಗ್ ಪ್ರದೇಶದಲ್ಲಿ ಭಕ್ತರಿಗೆ ಬೇಕಾದ ಎಲ್ಲ ವ್ಯವಸ್ಥೆ ಹಾಗೂ ವಾಣಿಜ್ಯ ಅಂಗಡಿಗಳನ್ನು ಮಾಡಲಾಗುವುದು. ಮಠದ ವತಿಯಿಂದ ಖರೀದಿಸಲಾದ ಐದೂವರೆ ಎಕರೆ ಜಾಗವನ್ನು ಸಂಪೂರ್ಣ ಅಭಿವೃದ್ಧಿ ಮಾಡಲಾಗುವುದು’ ಎಂದು ಶಿರೂರು ಶ್ರೀ ತಿಳಿಸಿದರು.
ಸಭೆಯಲ್ಲಿ ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ, ಪೇಜಾವರ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ, ಅದಮಾರು ಕಿರಿಯ ಸ್ವಾಮೀಜಿ, ಕಾಣಿಯೂರು ಶ್ರೀವಿದ್ಯಾಲ್ಲಭ ತೀರ್ಥ ಸ್ವಾಮೀಜಿ ಹಾಜರಿದ್ದರು.







