ಉಡುಪಿ: ಮಡಿವಾಳ ಮಾಚಿದೇವ ಜಯಂತಿ ಆಚರಣೆ

ಉಡುಪಿ, ಫೆ.1: ಮಾಚಿದೇವರು ವೀರಭದ್ರ ಅವತಾರಿ ಎನ್ನುವುದು ವಚನ ಮತ್ತು ಚರಿತ್ರೆಯಿಂದ ನಮಗೆ ತಿಳಿದು ಬರುತ್ತದೆ. ಬಸವಣ್ಣನಿಗಿಂತ ಹಿರಿಯರಾದ ಇವರು ಬಸವಣ್ಣನ ಎಲ್ಲ ಸಮಾಜ ಸುಧಾರಕ ಚಟುವಟಿಕೆಗಳಲ್ಲಿ ಸಹಕರಿಸುತ್ತಿದ್ದರು. ಶಿವಶರಣರ ಲಕ್ಷಾಂತರ ವಚನಗಳನ್ನು ಸಂರಕ್ಷಿಸಿದ ಖ್ಯಾತಿ ಮಾಚಿದೇವರಿಗೆ ಸಲ್ಲುತ್ತದೆ ಎಂದು ಉಡುಪಿ ನಗರಸಭೆ ಅಧ್ಯಕ್ಷ ಮೀನಾಕ್ಷಿ ಮಾಧವ ಬನ್ನಂಜೆ ಹೇಳಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಗುರುವಾರ ಕಡಿಯಾಳಿಯ ಯು. ಕಮಲಾ ಬಾ ಪ್ರೌಢಶಾಲಾ ಸಭಾಂಗಣದಲ್ಲಿ ನಡೆದ ಮಡಿವಾಳ ಮಾಚಿದೇವ ಜಯಂತಿಯನ್ನ ಉದ್ಘಾಟಿಸಿ ಅವರು ಮಾತನಾಡಿದರು.
ಇಡೀ ಜಗತ್ತಿಗೆ ಅರ್ಥಗರ್ಭಿತವಾಗಿ ಸಂದೇಶ ನೀಡಿದ ಶ್ರೇಷ್ಠ ಶರಣನಾಗಿದ್ದು, ಅವರ ನಂಬಿಕೆ, ವಿಚಾರಧಾರೆ, ಸಂದೇಶವನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮೀನಾಕ್ಷಿ ಹೇಳಿದರು.
ಮಡಿವಾಳ ಮಾಚಿದೇವ 12ನೇ ಶತಮಾನದ ಶ್ರೇಷ್ಠ ಶರಣ ಹಾಗೂ ವಚನಕಾರರಲ್ಲಿ ಒಬ್ಬರು. ನೂರಾರು ವಚನ ರಚಿಸಿ, ಸಾಮಾಜದ ಸಂಸ್ಕೃತಿ, ವಿಚಾರಗಳ ಉಳಿವಿಗಾಗಿ ಶ್ರಮಿಸಿದವರು. ಸಂಸ್ಕೃತಿ ಅಳಿಯದಂತೆ ನೂರಾರು ವಚನ ಸೃಷ್ಟಿಸಿ, ಸಮಾಜದ ಸುಸಂಸ್ಕೃತಿಯ ಉಳಿವಿಗಾಗಿ ಉತ್ತಮ ಸಂದೇಶ ನೀಡಿದವರು ಎಂದು ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಹೇಳಿದರು.
ಅಪರ ಜಿಲ್ಲಾಧಿಕಾರಿ ಅನುರಾಧ ಮಾತನಾಡಿ, ವಚನ ಸಾಹಿತ್ಯದ ಉತ್ತುಂಗದ ಕಾಲದಲ್ಲಿ ಹಿಂದುಳಿದ ಮತ್ತು ಶ್ರಮಜೀವಿಗಳ ಸಮಾನತೆಗೆ ಸಾಮಾಜಿಕ ಕ್ರಾಂತಿ ಮಾಡಿದವರಲ್ಲಿ ಮಾಚಿದೇವನೂ ಒಬ್ಬರು. ಮೇಲು-ಕೀಳು, ಬಡವರು, ಸಾಮಾಜಿಕ ಬಹಿಷ್ಕಾರ ಹಾಗೂ ಶೋಷಣೆಗೊಳಗಾದವರ ಬಗ್ಗೆ ಚಿಂತಿಸಿ, ವ್ಯಕ್ತಿ-ವ್ಯಕ್ತಿಗಳ ನಡುವೆ ಇರುವ ಅಂತರವನ್ನು ಹೋಗಲಾಡಿಸಲು ಹೋರಾಡಿದ ಮಹಾನ್ ಶರಣ ಎಂದರು.
ಪೆರ್ಡೂರು ಪ್ರೌಢಶಾಲೆಯ ಶಿಕ್ಷಕ ಜಿ.ಪಿ.ಪ್ರಬಾಕರ ತುಮುರಿ ವಿಶೇಷ ಉಪನ್ಯಾಸ ನೀಡಿ, ಕನ್ನಡ ಸಾಹಿತ್ಯದ ಎರಡು ಕಣ್ಣು ವಚನ ಮತ್ತು ದಾಸ ಸಾಹಿತ್ಯ. 12-13ನೇ ಶತಮಾನ ವೈಚಾರಿಕತೆಯನ್ನು ಎತ್ತಿಹಿಡಿದ ಕಾಲವಾಗಿದ್ದು, ವ್ಯಕ್ತಿ ಜೀವನದ ಸಣ್ಣ-ಸಣ್ಣ ಕಾಯಕವನ್ನು ಪೂಜ್ಯಭಾವದಿಂದ ಪರಿಗಣಿಸಿ, ಪರಿಶುದ್ಧ ಜೀವನದ ವೌಲ್ಯವನ್ನು ವಚನಗಳ ಮೂಲಕ ಸಾರಿದ ವಚನ ಶ್ರೇಷ್ಠರಲ್ಲಿ ಮಡಿವಾಳ ಮಾಚಿದೇವ ಕೂಡ ಪ್ರಮುಖರು ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಆಡಳಿತಾಧಿಕಾರಿ ಡಾ.ಎಚ್.ಶಾಂತರಾಮ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ರಜಕ ಯಾನೆ ಮಡಿವಾಳ ಸಂಘದ ಅಧ್ಯಕ್ಷ ಶಶಿರಾಜ್ ಕುಂದರ್, ಯು.ಕಮಲಾ ಬಾ ಪ್ರೌಢಶಾಲೆಂು ಮುಖ್ಯೋಪಾಧ್ಯಾಯ ಹೆಬ್ಬಾರ್ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ತಾಂತ್ರಿಕ ಮೇಲ್ವಿಚಾರಕಿ ಪೂರ್ಣಿಮಾ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಪ್ರವೀಣ್, ಚೈತ್ರ, ರಂಜಿತಾ ನಿರೂಪಿಸಿದರು.







