ಸಿನೆಮಾ ಉದ್ಯಮ ‘ತೆರಿಗೆ ಮುಕ್ತ’ವಾಗಲಿ : ಕಲಾವಿದರ ಆಶಯ

ಮುಂಬೈ, ಫೆ.1: ಮನೋರಂಜನೆಯ ಉದ್ಯಮವಾಗಿರುವ ‘ಸಿನೆಮಾ ಕ್ಷೇತ್ರ’ ತೆರಿಗೆ ಮುಕ್ತವಾಗಬೇಕೆಂದು ಬಾಲಿವುಡ್‌ನ ಕಲಾವಿದರು ಅಭಿಪ್ರಾಯಪಟ್ಟಿದ್ದಾರೆ.
ಸಿನೆಮಾ ಉದ್ಯಮ ಸಂಪೂರ್ಣ ತೆರಿಗೆ ಮುಕ್ತವಾಗಬೇಕೆಂದು ತಾನು ಬಯಸುತ್ತೇನೆ. ಆದರೆ ಇದು ಸಾಧ್ಯವಾಗದು ಎಂಬುದೂ ತಿಳಿದಿದೆ. ಈ ಬಗ್ಗೆ ಸರಕಾರವೇ ತೀರ್ಮಾನ ಕೈಗೊಳ್ಳಬೇಕಿದೆ ಎಂದು ನಟಿ ಕಾಜೋಲ್ ಹೇಳಿದ್ದಾರೆ.
ಕಾಜೋಲ್ ಹೇಳಿಕೆಯನ್ನು ನಟಿ ರಿಚಾ ಚಡ್ಡಾ ಬೆಂಬಲಿಸಿದ್ದಾರೆ. ಆದರೆ ದೇಶದ ಅರ್ಥವ್ಯವಸ್ಥೆ ಕುಸಿಯುತ್ತಾ ಸಾಗುತ್ತಿರುವುದು ಕಳವಳಕಾರಿ ವಿಷಯ ಎಂದವರು ಹೇಳಿದ್ದಾರೆ. ಸಿನೆಮಾ ಉದ್ಯಮದ ಮೇಲೆ ಅತ್ಯಧಿಕ ಮನೋರಂಜನೆ ತೆರಿಗೆ ವಿಧಿಸಲಾಗುತ್ತಿದೆ. ಈ ರೀತಿಯ ಅಧಿಕ ತೆರಿಗೆ ಸಿನೆಮಾ ಕ್ಷೇತ್ರದ ಅವನತಿಗೆ ಕಾರಣವಾಗುತ್ತದೆ. ಆದ್ದರಿಂದ ಇದನ್ನು ಪರಿಷ್ಕರಿಸಬೇಕು ಎಂದು ರಿಚಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆದರೆ ಸಿನೆಮ ಉದ್ಯಮವನ್ನು ತೆರಿಗೆ ಮುಕ್ತಗೊಳಿಸುವುದು ಸರಿಯಾದ ಆಯ್ಕೆಯಾಗದು ಎಂದು ಖ್ಯಾತ ಕೋರಿಯೋಗ್ರಾಫರ್ ಟೆರೆನ್ಸ್ ಲಿವಿಸ್ ಹೇಳಿದ್ದಾರೆ. ಮನೋರಂಜನಾ ಉದ್ಯಮ ಸಮಾಜ ಸೇವೆಯಲ್ಲ. ನಾವು ನಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಇಲ್ಲಿ ಕೆಲಸ ಮಾಡುತ್ತಿದ್ದೇವೆ. ಆದ್ದರಿಂದ ತೆರಿಗೆ ಪಾವತಿಸಲೇಬೇಕು. ಆದರೆ ತೆರಿಗೆ ಕಡಿಮೆಯಾಗಬೇಕು ಎಂಬುದಕ್ಕೆ ತನ್ನ ಸಹಮತವಿದೆ ಎಂದವರು ಹೇಳಿದ್ದಾರೆ.