ಹಿರಿಯ ರಾಜಕಾರಣಿ ಮತ್ತು ಪತ್ನಿಯ ರಕ್ತಸಿಕ್ತ ಮೃತದೇಹ ಪತ್ತೆ
ಕರಾಚಿ, ಫೆ.1: ಪಾಕಿಸ್ತಾನದ ಹಿರಿಯ ರಾಜಕಾರಣಿ ಮಿರ್ ಹಝರ್ ಖಾನ್ ಬಿಜರನಿ ಹಾಗೂ ಅವರ ಪತ್ನಿಯ ರಕ್ತಸಿಕ್ತ ಮೃತದೇಹ ಕರಾಚಿಯಲ್ಲಿರುವ ಅವರ ನಿವಾಸದಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಂತೀಯ ಸಚಿವರಾಗಿದ್ದ ಬಿಜರನಿ ಹಾಗೂ ಅವರ ಪತ್ನಿಯನ್ನು ಹತ್ಯೆ ಮಾಡಲಾಗಿದೆಯೇ ಅಥವಾ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಬ್ಬರ ದೇಹಗಳಲ್ಲೂ ಬುಲೆಟ್ಗಳು ಪತ್ತೆಯಾಗಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಹಿರಿಯ ನಾಯಕರಾಗಿದ್ದ ಬಿಜರನಿ, ಸಿಂಧ್ ಪ್ರಾಂತ್ಯದ ಯೋಜನಾ ಮತ್ತು ಅಭಿವೃದ್ಧಿ ಸಚಿವರಾಗಿದ್ದರು ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ.
ಬಿಜರನಿ ಹಾಗೂ ಅವರ ಪತ್ರಕರ್ತೆ ಪತ್ನಿ ಫರಿಹ ರಝಾಕ್ ಅವರ ಮೃತದೇಹವು ಮಲಗುವ ಕೋಣೆಯಲ್ಲಿ ಪತ್ತೆಯಾಗಿತ್ತು. ಗುರುವಾರದಂದು ಮನೆಯ ಆಳು ಈ ಮೃತದೇಹಗಳನ್ನು ಕಂಡಿದ್ದು ಮನೆಯಲ್ಲಿ ಕಳ್ಳತನವಾಗಿರುವ ಬಗ್ಗೆ ಯಾವುದೇ ಸುಳಿವುಗಳು ಲಭ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Next Story