‘ಮುದ್ರಾ’ ಸಾಲದ ಗುರಿ 3 ಲಕ್ಷ ಕೋಟಿ : ಜೇಟ್ಲಿ

ಹೊಸದಿಲ್ಲಿ, ಫೆ.1: 2018-19ರಲ್ಲಿ ಸ್ವದ್ಯೋಗಿಗಳಿಗೆ ‘ಮುದ್ರಾ’ ಯೋಜನೆಯಡಿ ನೀಡುವ ಸಾಲದ ಗುರಿಯನ್ನು ಸರಕಾರ 3 ಲಕ್ಷ ಕೋಟಿ ರೂ.ಗೆ ನಿಗದಿಗೊಳಿಸಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.
2015ರಲ್ಲಿ ಆರಂಭಿಸಲಾದ ‘ಮುದ್ರಾ’ ಯೋಜನೆಯಡಿ ಇದುವರೆಗೆ 10.38 ಫಲಾನುಭವಿಗಳಿಗೆ 4.6 ಲಕ್ಷ ಕೋಟಿ ರೂ. ನೆರವು ನೀಡಲಾಗಿದೆ. ಇದರಲ್ಲಿ ಶೇ.76ರಷ್ಟು ಮಹಿಳೆಯರು ಹಾಗೂ ಶೇ.50ರಷ್ಟು ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ವರ್ಗದವರು ಎಂದು ವಿತ್ತ ಸಚಿವರು ತಿಳಿಸಿದ್ದಾರೆ.
ಕೃಷಿಯೇತರ ಚಟುವಟಿಕೆಗಳಿಗೆ ನೀಡಲಾಗುವ 10 ಲಕ್ಷ ರೂ.ವರೆಗಿನ ಈ ಸಾಲವು ಹೈನುಗಾರಿಕೆ, ಕೋಳಿಸಾಕಣೆ, ಜೇನು ನೊಣ ಸಾಕಣೆ ಮುಂತಾದ ಚಟುವಟಿಕೆಗೂ ದೊರೆಯುತ್ತದೆ. ಫಲಾನುಭವಿ ವ್ಯಕ್ತಿಗಳ ಉದ್ಯಮದ ಸ್ವರೂಪದ ಆಧಾರದಲ್ಲಿ ‘ಶಿಶು, ಕಿಶೋರ್ ಹಾಗೂ ತರುಣ್’ ಎಂಬ ಮೂರು ವಿಭಾಗಗಳಲ್ಲಿ ಮುದ್ರಾ ಸಾಲವನ್ನು ನೀಡಲಾಗುತ್ತದೆ. ಶಿಶು ವಿಭಾಗದಲ್ಲಿ 50,000 ರೂ.ವರೆಗಿನ ಸಾಲದ ಮೊತ್ತ, ಕಿಶೋರ್ ವಿಭಾಗದಲ್ಲಿ 50,000 ರೂ.ಗಿಂತ ಅಧಿಕ- 5 ಲಕ್ಷ ರೂ.ವರೆಗೆ ಹಾಗೂ ತರುಣ್ ವಿಭಾಗದಲ್ಲಿ 5 ಲಕ್ಷ ರೂ.ಗಿಂತ ಹೆಚ್ಚು- 10 ಲಕ್ಷ ರೂ.ವರೆಗಿನ ಮೊತ್ತದ ಸಾಲ ದೊರೆಯುತ್ತದೆ.