ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಕೆ.ಎಂ. ಜೋಸೆಫ್, ಇಂದು ಮಲ್ಹೋತ್ರಾ ನೇಮಕ

ಹೊಸದಿಲ್ಲಿ, ಫೆ.1: ಉತ್ತರಾಖಂಡ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಕೆ.ಎಂ. ಜೋಸೆಫ್ ಅವರನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕ ಮಾಡಲಾಗಿದೆ. ಸದ್ಯ ಇರುವ ಎಲ್ಲ ಉಚ್ಚ ನ್ಯಾಯಾಲಯಗಳ ಮುಖ್ಯ ನ್ಯಾಯಾಧೀಶರು ಮತ್ತು ನ್ಯಾಯಾಧೀಶರುಗಳ ಪೈಕಿ ಜೋಸೆಫ್ ಅವರು ಅತ್ಯಂತ ಸೂಕ್ತ ಮತ್ತು ಅರ್ಹತೆ ಹೊಂದಿರುವ ವ್ಯಕ್ತಿ ಎಂದು ಸರ್ವೋಚ್ಚ ನ್ಯಾಯಾಲಯ ಮಂಡಳಿಯು ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಕೆ.ಎಂ. ಜೋಸೆಫ್ ಅವರ ಜೊತೆಗೆ ಹಿರಿಯ ವಕೀಲೆ ಇಂದು ಮಲ್ಹೋತ್ರಾ ಅವರನ್ನು ಕೂಡಾ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶೆಯಾಗಿ ನೇಮಕ ಮಾಡಲಾಗಿದೆ. ಮಲ್ಹೋತ್ರಾ ಅವರು ಉಚ್ಚ ನ್ಯಾಯಾಲಯದಿಂದ ಭಡ್ತಿ ಹೊಂದದೆ ನೇರವಾಗಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶೆಯಾಗಿ ನೇಮಕಗೊಂಡಿರುವ ಮೊದಲ ಮಹಿಳಾ ವಕೀಲೆಯಾಗಿದ್ದಾರೆ.
ಇಂದು ಮಲ್ಹೋತ್ರಾ ಅವರು, ಸ್ವಾತಂತ್ರ್ಯಾನಂತರ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶೆಯಾಗಿ ಆಯ್ಕೆಯಾಗಿರುವ ಏಳನೇ ಮಹಿಳೆಯಾಗಿದ್ದಾರೆ.
ಮುಖ್ಯ ನ್ಯಾಯಾಧೀಶರನ್ನೂ ಸೇರಿಸಿ 31 ನ್ಯಾಯಾಧೀಶರನ್ನು ಹೊಂದಬೇಕಾದ ಸರ್ವೋಚ್ಚ ನ್ಯಾಯಾಲಯದಲ್ಲಿ ಸದ್ಯ 25 ನ್ಯಾಯಾಧೀಶರುಗಳಿದ್ದಾರೆ.