ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ 14.34 ಲಕ್ಷ ಕೋ. ರೂ.
ಕೇಂದ್ರ ಬಜೆಟ್ 2018

ಹೊಸದಿಲ್ಲಿ, ಫೆ.1: 2018-19ರ ಸಾಲಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕೆ 14.34 ಲಕ್ಷ ಕೋಟಿ ರೂ.ಯನ್ನು ಸರಕಾರ ನಿಗದಿಗೊಳಿಸಿದೆ. 321 ಕೋಟಿ ಮಾನವ ದಿನಗಳನ್ನು ಬಳಸುವ ಮೂಲಕ ಉದ್ಯೋಗ ನಿರ್ಮಿಸಿ ಗ್ರಾಮೀಣ ಪ್ರದೇಶಗಳ ಮೂಲಭೂತ ಸೌಕರ್ಯ ನಿರ್ಮಿಸಲಾಗುವುದು ಎಂದು ಸರಕಾರ ತಿಳಿಸಿದೆ.
ಉದ್ಯೋಗ ನಿರ್ಮಿಸುವುದರ ಜೊತೆಗೆ, 3.17 ಲಕ್ಷ ಕಿ.ಮೀ. ರಸ್ತೆ ನಿರ್ಮಾಣ, 51 ಲಕ್ಷ ಹೊಸ ವಸತಿಗಳ ನಿರ್ಮಾಣ, 1.88 ಕೋಟಿ ಶೌಚಾಲಯಗಳ ನಿರ್ಮಾಣ ಕಾರ್ಯ ನಡೆಯಲಿದೆ. ಅಲ್ಲದೆ 1.75 ಕೋಟಿ ಹೊಸ ಮನೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲಾಗುವುದು ಎಂದು ಬಜೆಟ್ ಭಾಷಣದಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.
ಕೃಷಿ ಕ್ಷೇತ್ರದ ಸಶಕ್ತೀಕರಣದೊಂದಿಗೆ ಗ್ರಾಮೀಣಾಭಿವೃದ್ಧಿಯ ಧ್ಯೇಯ ಹಾಗೂ ದೇಶದ ಅರ್ಥವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಸರಕಾರ ಬಜೆಟ್ ಮಂಡಿಸಿದೆ .ಗ್ರಾಮೀಣ ಪ್ರದೇಶದ ಜನತೆಗೆ ಗರಿಷ್ಟಮಟ್ಟದಲ್ಲಿ ಜೀವನಾಧಾರ ವ್ಯವಸ್ಥೆಗೆ ಅನುಕೂಲ ಮಾಡಿಕೊಡುವುದು ಸರಕಾರದ ಉದ್ದೇಶವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ರಾಷ್ಟ್ರೀಯ ಗ್ರಾಮೀಣ ಜೀವನಾಧಾರ ಯೋಜನೆಯಡಿ ನೀಡಲಾಗುವ ಅನುದಾನವನ್ನು 5,750 ಕೋಟಿ ರೂ.ಗೆ ಹೆಚ್ಚಿಸಲಾಗಿದೆ . ಸ್ವಸಹಾಯ ಗುಂಪಿನ ಮಹಿಳೆಯರಿಗೆ ನೀಡಲಾಗುವ ಸಾಲ ಮಾರ್ಚ್ ವೇಳೆಗೆ 75,000 ಕೋಟಿ ರೂ.ಗೆ ತಲುಪುವ ನಿರೀಕ್ಷೆಯಿದೆ ಎಂದೂ ಸಚಿವರು ತಿಳಿಸಿದ್ದಾರೆ.