ಪ್ರಕರಣಗಳ ಹಂಚಿಕೆಗೆ ರೋಸ್ಟರ್ ವ್ಯವಸ್ಥೆ ಜಾರಿ ಮಾಡಿದ ಸುಪ್ರೀಂಕೋರ್ಟ್

ಹೊಸದಿಲ್ಲಿ, ಫೆ.1: ಸರ್ವೋಚ್ಚ ನ್ಯಾಯಾಲಯವು ಗುರುವಾರದಿಂದ ಪ್ರಕರಣಗಳ ಹಂಚಿಕೆಗೆ ರೋಸ್ಟರ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಸಾರ್ವಜನಿಕ ಹಿತಾಸಕ್ತಿ ದಾವೆಗಳನ್ನು ತಮ್ಮಲ್ಲೇ ಉಳಿಸಿಕೊಳ್ಳಲು ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರಾ ನಿರ್ಧರಿಸಿದ್ದಾರೆ.
ಈ ಬಗ್ಗೆ ಮುಖ್ಯ ನ್ಯಾಯಾಧೀಶರ ಹೇಳಿಕೆಯನ್ನು ಶ್ರೇಷ್ಠ ನ್ಯಾಯಾಲಯದ ಅಧಿಕೃತ ಜಾಲತಾಣದಲ್ಲಿ ಸಾರ್ವಜನಿಕಗೊಳಿಸಲಾಗಿದೆ.
ಹೊಸ ಪ್ರಕರಣಗಳನ್ನು ರೋಸ್ಟರ್ ವ್ಯವಸ್ಥೆಯಲ್ಲಿ ಹಂಚುವಂತೆ ಮುಖ್ಯ ನ್ಯಾಯಾಧೀಶರು ಆದೇಶಿಸಿದ್ದಾರೆ. ಈ ಆದೇಶವು ಫೆಬ್ರವರಿ ಐದರಿಂದ ಜಾರಿಗೆ ಬರಲಿದೆ ಎಂದು 13 ಪುಟಗಳ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಸೂಕ್ಷ್ಮವಾದ ಸಾರ್ವಜನಿಕ ಹಿತಾಸಕ್ತಿ ದಾವೆಗಳನ್ನು ಹಾಗೂ ಪ್ರಮುಖ ಪ್ರಕರಣಗಳನ್ನು ಕಿರಿಯ ನ್ಯಾಯಾಧೀಶರಿಗೆ ಒಪ್ಪಿಸುವುದನ್ನು ಪ್ರಶ್ನಿಸಿ ಜನವರಿ 12ರಂದು ಸರ್ವೋಚ್ಚ ನ್ಯಾಯಾಲಯದ ನಾಲ್ವರು ಹಿರಿಯ ನ್ಯಾಯಾಧೀಶರುಗಳಾದ ಜೆ. ಚಲಮೇಶ್ವರ್, ರಂಜನ್ ಗೊಗೊಯಿ, ಎಂ.ಬಿ ಲೊಕೂರ್ ಹಾಗೂ ಕುರಿಯನ್ ಜೋಸೆಫ್ ಅವರು ಪತ್ರಿಕಾಗೋಷ್ಟಿ ಕರೆದಿದ್ದ ಹಿನ್ನೆಲೆಯಲ್ಲಿ ರೋಸ್ಟರ್ ವ್ಯವಸ್ಥೆಯ ಬಗ್ಗೆ ಸಾರ್ವಜನಿಕರಿಗೆ ತಿಳಿಯುವಂತೆ ಮಾಡಿರುವುದು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಮುಖ್ಯ ನ್ಯಾಯಾಧೀಶರು ಹಾಗೂ ಇತರ ಹನ್ನೊಂದು ನ್ಯಾಯಾಧೀಶರು ಮುನ್ನಡೆಸುವ ಪೀಠಗಳಿಗೆ ಒಪ್ಪಿಸಲಾಗುವ ಪ್ರಕರಣಗಳ ಮಾಹಿತಿಯನ್ನು ಅಧಿಸೂಚನೆಯಲ್ಲಿ ನೀಡಲಾಗಿದೆ.
ದೇಶದ ಮೇಲೆ ದೂರಗಾಮಿ ಪರಿಣಾಮವನ್ನು ಬೀರುವಂಥ ಪ್ರಕರಣಗಳನ್ನು ಮುಖ್ಯನ್ಯಾಯಾಧೀಶರು ಆಯ್ದ ನ್ಯಾಯಪೀಠಕ್ಕೆ ಒಪ್ಪಿಸುತ್ತಿದ್ದಾರೆ. ಈ ರೀತಿ ಹಂಚಿಕೆಗೆ ಯಾವುದೇ ತರ್ಕವಿಲ್ಲ ಎಂದು ಹೇಳಿ ಹಿರಿಯ ನಾಲ್ವರು ನ್ಯಾಯಾಧೀಶರು ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದಿದ್ದರು. ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗದಿದ್ದಾಗ ಸಾರ್ವಜನಿಕವಾಗಿ ಪತ್ರಿಕಾಗೋಷ್ಟಿ ಕರೆದು ಅಸಮಾಧಾನ ತೋಡಿಕೊಂಡಿದ್ದರು. ಈ ಬೆಳವಣಿಗೆಯ ನಂತರ ಸರ್ವೋಚ್ಚ ನ್ಯಾಯಾಯಲಯದ ವಕೀಲ ಸಂಘದ ಅಧ್ಯಕ್ಷರಾಗಿರುವ ವಿಕಾಸ್ ಸಿಂಗ್, ಸರ್ವೋಚ್ಚ ನ್ಯಾಯಾಲಯವು ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಇರುವಂತೆ ರೋಸ್ಟರ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದರು. ಇದಕ್ಕೆ ಹಲವು ನ್ಯಾಯಾಧೀಶರು ಕೂಡಾ ಸಮ್ಮತಿ ಸೂಚಿಸಿದ್ದರು.