11ದಿನದ ಮಗುವಿಗೆ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ: ಮಣಿಪಾಲ ಕೆಎಂಸಿ ವೈದ್ಯರ ಸಾಧನೆ

ಮಣಿಪಾಲ, ಫೆ.1: ದೊಡ್ಡ ರಕ್ತನಾಳಗಳ ಸ್ಥಾನಪಲ್ಲಟ್ಟ ಎಂಬ ಗಂಭೀರವಾದ ಜನ್ಮಜಾತ ಹೃದಯ ನ್ಯೂನತೆಯಿಂದ ಬಳಲುತಿದ್ದ ನವಜಾತ ಶಿಶುವಿಗೆ ಹುಟ್ಟಿದ 11ನೆ ದಿನದಲ್ಲಿ ಮಣಿಪಾಲ ಕಸ್ತೂರ್‌ಬಾ ಆಸ್ಪತ್ರೆಯ ಹೃದಯ ಶಸ್ತ್ರಚಿಕಿತ್ಸಾ ತಜ್ಞ ಡಾ. ಅರವಿಂದ ಬಿಷ್ಣೋಯ್ ನೇತೃತ್ವದ ವೈದ್ಯರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ.
ಕೆಎಂಸಿ ಮಣಿಪಾಲದಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಈ ವಿಷಯ ತಿಳಿಸಿದರು. ಮಗು ಈಗ ಸಂಪೂರ್ಣ ಆರೋಗ್ಯವಾಗಿದ್ದು, ವೇಗವಾಗಿ ಚೇತರಿಸಿಕೊಳ್ಳುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಗೊಳ್ಳಲು ಸಿದ್ಧವಿದೆ ಎಂದರು.
ಬ್ರಹ್ಮಾವರದಲ್ಲಿ ಮೊಬೈಲ್ ಅಂಗಡಿ ನಡೆಸುವ ಹರೀಶ್ ಹಾಗೂ ಪೂರ್ಣಿಮಾ ದಂಪತಿಯ ಮೂರನೇ ಮಗುವಿಗೆ ಜನವರಿ ಮೂರನೇ ವಾರ ಜಿಲ್ಲಾಸ್ಪತ್ರೆ ಯಲ್ಲಿ ಜನಿಸಿದಾಗಲೇ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಅಲ್ಲದೇ ಮಗು ಅಳುವಾಗ ನೀಲಿ ಬಣ್ಣಕ್ಕೆ ತಿರುಗುತ್ತಿತ್ತು. ಕೂಡಲೇ ಆಸ್ಪತ್ರೆಯ ವೈದ್ಯರು ಕೆಎಂಸಿಗೆ ತಜ್ಞ ವೈದ್ಯರ ಬಳಿ ಕರೆದೊಯ್ಯುವಂತೆ ಸೂಚಿಸಿದ್ದರು.
ಮಣಿಪಾಲದಲ್ಲಿ ಈಗ ತಾನೇ ಜನಿಸಿದ ಮಗು ಸೇರಿದಂತೆ ಮಕ್ಕಳ ಹೃದಯ ಶಸ್ತ್ರಚಿಕಿತ್ಸಾ ತಜ್ಞರ ವಿಭಾಗವನ್ನು ಅಗತ್ಯ ಸೌಕರ್ಯ ಹಾಗೂ ಸಲಕರಣೆ ಗಳೊಂದಿಗೆ ಪ್ರಾರಂಭಿಸಲಾಗಿದ್ದು, ಇಲ್ಲಿ ಡಾ. ಅರವಿಂದ ಬಿಷ್ಣೊಯ್ ಹಾಗೂ ಶಿಶುರೋಗ ತಜ್ಞ ಡಾ.ಲೆಸ್ಲಿ ಲೂಯಿಸ್ ನೇತೃತ್ವದ ತಂಡ ಮಗುವಿನ ಕಾಯಿಲೆ ಯನ್ನು ಕೂಡಲೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆಗೆ ಮುಂದಾದರು. ಜನಿಸಿದ ಮರುದಿನ ಕೆಎಂಸಿಗೆ ಬಂದ ಮಗುವಿಗೆ ಸೂಕ್ತ ಪೂರ್ವಸಿದ್ಧತೆ, ಔಷಧಿಯನ್ನು ನೀಡಿ 11ನೇ ದಿನ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಲಾಯಿತು ಎಂದು ಡಾ.ಅವಿನಾಶ್ ತಿಳಿಸಿದರು.
ಈ ಮಗು ಟ್ರಾನ್ಸ್‌ಪೊಸಿಷನ್ ಆಫ್ ದಿ ಗ್ರೇಟ್ ಆರ್ಟರೀಸ್ (ಟಿಜಿಎ) ಅಂದರೆ ದೊಡ್ಡ ರಕ್ತನಾಳಗಳ ಸ್ಥಾನಪಲ್ಲಟ ಎಂಬ ಗಂಭೀರ ಜನ್ಮಜಾತ ಹೃದಯ ನ್ಯೂನತೆಯಿಂದ ಬಳಲುತ್ತಿದೆ ಎಂದು ವೈದ್ಯರು ಗುರುತಿಸಿದರು. ಜನನ ಪೂರ್ವ ಭ್ರೂಣದಲ್ಲಿ ಈ ಕಾಯಿಲೆಯನ್ನು ಪತ್ತೆ ಹಚ್ಚಲು ‘ಭ್ರೂಣದ ಹೃದಯ ಎಕೋ ಕಾರ್ಡಿಯೋಗ್ರಫಿ’ಯಂತ್ರದಿಂದ ಮಾತ್ರ ಸಾಧ್ಯವಿದೆ. ಇದನ್ನು ಹೆಚ್ಚು ಅಪಾಯದ ಗರ್ಭಧಾರಣೆ ಹೊಂದಿರುವ ಗರ್ಭಿಣಿ ರೋಗಿಗಳಿಗೆ (ಹೈ ರಿಸ್ಕ್ ಪ್ರೆಗ್ನೆನ್ಸಿ ಪೇಶೆಂಟ್) ಮಾತ್ರ ಮಾಡಲಾಗುತ್ತದೆ ಎಂದ ಕೆಎಂಸಿಯ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ.ಟಾಮ್ ದೇವರ್ಸಿಯ ತಿಳಿಸಿದರು.
ಮಣಿಪಾಲದಲ್ಲಿ ಈ ಸೌಲಭ್ಯ ಇತ್ತೀಚೆಗೆ ಪ್ರಾರಂಭಗೊಂಡಿದ್ದು, ಈ ಮೊದಲು ವರ್ಷಕ್ಕೆ ಬರುವ 10-12 ಮಕ್ಕಳನ್ನು ಚಿಕಿತ್ಸೆಗೆಂದು ಬೆಂಗಳೂರಿಗೆ ಕಳುಹಿಸಲಾಗುತ್ತಿತ್ತು. ಇದು ತುಂಬಾ ವೆಚ್ಚದಾಯಕವಾಗಿತ್ತು. ಆದರೆ ಇದೀಗ ಇಲ್ಲಿ ಅತ್ಯಾಧುನಿಕ ಸೌಲಭ್ಯ ಮತ್ತು ತಾಂತ್ರಿಕ ಪರಿಣತಿ ಹೊಂದಿರುವ ಸಿಬ್ಬಂದಿಗಳಿದ್ದಾರೆ ಎಂದರು.
ಈ ಕಾಯಿಲೆಗೆ ಕಾರಣಗಳನ್ನು ವಿವರಿಸಿದ ಅವರು ಗರ್ಭ ಧರಿಸಿದ ಮೊದಲ 8 ವಾರಗಳಲ್ಲಿ ಭ್ರೂಣದ ಹೃದಯದ ಅಸಹಜ ಬೆಳವಣಿಗೆಯಿಂದ ಹೃದಯದಿಂದ ಶ್ವಾಸಕೋಶಗಳಿಗೆ ಮತ್ತು ದೇಹದ ಇತರ ಭಾಗಗಳಿಗೆ ರಕ್ತವನ್ನು ಕೊಂಡೊಯ್ಯುವ ದೊಡ್ಡ ರಕ್ತನಾಳಗಳು ಅದಲು ಬದಲಾಗುತ್ತವೆ. ಇದು ಸಾವಿರ ಮಕ್ಕಳಲ್ಲಿ ಒಂದು ಮಗುವಿನಲ್ಲಿ ಈ ಕಾಯಿಲೆ ಕಂಡಬರುತ್ತದೆ. ಹುಟ್ಟಿದ 15 ದಿನಗಳೊಗೆ ಶಸ್ತ್ರಚಿಕಿತ್ಸೆ ಮಾಡಿದರೆ ಮಾತ್ರ ಬದುಕುಳಿಯುತ್ತದೆ. ಇಲ್ಲದಿದ್ದರೆ ಒಂದು ತಿಂಗಳಿನಿಂದ ಒಂದು ವರ್ಷದವರೆಗೆ ಮಾತ್ರ ಮಗು ಬದುಕುಳಿಯಬಲ್ಲದು ಎಂದು ಡಾ. ಅರವಿಂದ ತಿಳಿಸಿದರು.
ತುಂಬಾ ಸೂಕ್ಷವಾದ ಈ ಶಸ್ತ್ರಚಿಕಿತ್ಸೆಯನ್ನು ಡಾ.ಅರವಿಂದ ಬಿಷ್ಣೊಯ್ ಮತ್ತವರ ತಂಡ ಯಶಸ್ವಿಯಾಗಿ ನಡೆಸಿದೆ. ಮಗು ಹುಟ್ಟುವಾಗಲೇ ಆರೋಗ್ಯಪೂರ್ಣವಾಗಿದ್ದು, ತೂಕವನ್ನು ಹೊಂದಿದ್ದರಿಂದ ಹೆಚ್ಚಿನ ಸಮಸ್ಯೆ ಎದುರಾಗಲಿಲ್ಲ ಎಂದು ಅವರು ನುಡಿದರು. ವೆಂಟಿಲೇಟರ್ ಇಲ್ಲದೇ ನಾವು ಶಸ್ತ್ರಚಿಕಿತ್ಸೆ ನಡೆಸಿದ್ದು, ಅಪಧಮನಿಗಳನ್ನು ಅದಲು ಬದಲು ಮಾಡುವುದನ್ನು ಒಳಗೊಂಡಿರುವ ಬಹಳ ಸಂಕೀರ್ಣವಾದ ಟಿಜಿಎ ಶಸ್ತ್ರಚಿಕಿತ್ಸೆಗೆ ಒಳಗಾದ ಶಿಶುಗಳು ಸಹಜ ಬೆಳವಣಿಗೆ ಹೊಂದುತ್ತಾರೆ ಎಂದು ಡಾ.ಅರವಿಂದ ಬಿಷ್ಣೋಯ್ ಹೇಳಿದರು.
ಶಸ್ತ್ರಚಿಕಿತ್ಸೆಯ ಬಳಿಕ ಡಾ. ಲೆಸ್ಲಿ ಲೂಯಿಸ್ ನೇತೃತ್ವದಲ್ಲಿ ಶಿಶುರೋಗ ತಜ್ಞರು ಮಗು ಚೇತರಿಸಿಕೊಳ್ಳಲು ಅಗತ್ಯವಿರುವ ಆರೈಕೆಯನ್ನು ಒದಗಿಸಿದರು. ಈಗ ಮಗು ಚೆನ್ನಾಗಿ ಚೇತರಿಸಿಕೊಂಡಿದ್ದು, ಆರೋಗ್ಯಪೂರ್ಣವಾಗಿದೆ. ಇಂಥ ಪ್ರಕರಣಗಳಲ್ಲಿ ಶಸ್ತ್ರಚಿಕಿತ್ಸೆಯ ಮುಂಚೆ ಮತ್ತು ನಂತರ ನೀಡುವ ಆರೈಕೆಯು ಮಗು ಚೇತರಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಎಂದು ಡಾ. ಅವಿನಾಶ ಶೆಟ್ಟಿ ನುಡಿದರು.
ಶಸ್ತ್ರಚಿಕಿತ್ಸೆಯ ಬಳಿಕ ಡಾ. ಲೆಸ್ಲಿ ಲೂಯಿಸ್ ನೇತೃತ್ವದಲ್ಲಿ ಶಿಶುರೋಗ ತಜ್ಞರು ಮಗು ಚೇತರಿಸಿಕೊಳ್ಳಲು ಅಗತ್ಯವಿರುವ ಆರೈಕೆಯನ್ನು ಒದಗಿಸಿದರು. ಈಗ ಮಗು ಚೆನ್ನಾಗಿ ಚೇತರಿಸಿಕೊಂಡಿದ್ದು, ಆರೋಗ್ಯಪೂರ್ಣವಾಗಿದೆ. ಇಂಥ ಪ್ರಕರಣಗಳಲ್ಲಿ ಶಸ್ತ್ರಚಿಕಿತ್ಸೆಯ ಮುಂಚೆ ಮತ್ತು ನಂತರ ನೀಡುವ ಆರೈಕೆಯು ಮಗು ಚೇತರಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಎಂದು ಡಾ. ಅವಿನಾಶ ಶೆಟ್ಟಿ ನುಡಿದರು.
ರಾಷ್ಟ್ರೀಯ ಬಾಲ ಸ್ವಾಸ್ಥ ಯೋಜನೆಯಿಂದ ಮಗುವಿನ ಸಂಪೂರ್ಣ ಚಿಕಿತ್ಸೆ ಉಚಿತವಾಗಿ ಲಭಿಸಿದೆ. ಇದೀಗ ಮೂರು ವಾರ ಪೂರ್ಣಗೊಂಡಿರುವ ಮಗುವಿನ ಹೆತ್ತವರಾದ ಹರೀಶ್ ಹಾಗೂ ಪೂರ್ಣಿಮಾ ಅವರು ತಮ್ಮ ಮಗುವಿನ ಪುನರ್‌ಜನ್ಮಕ್ಕೆ ಕಾರಣರಾದ ಕೆಎಂಸಿಯ ವೈದ್ಯರ ತಂಡಕ್ಕೆ ಕೃತಜ್ಞತೆ ಸಲ್ಲಿಸಿದರು.







