‘ಮೇಕ್ ಇನ್ ಇಂಡಿಯಾ’ ಉಪಕ್ರಮಕ್ಕೆ ಉತ್ತೇಜನ: ಆಮದು ವಸ್ತುಗಳ ಮೇಲಿನ ಸುಂಕ ಹೆಚ್ಚಳ
ಬಜೆಟ್ 2018

ಹೊಸದಿಲ್ಲಿ, ಫೆ.1: ಸರಕಾರದ ‘ಮೇಕ್ ಇನ್ ಇಂಡಿಯಾ’ ಉಪಕ್ರಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸರಕಾರ ಆಮದು ಮಾಡಿಕೊಳ್ಳುವ ಹಲವಾರು ವಸ್ತುಗಳ ಮೇಲಿನ ಸುಂಕವನ್ನು ಹೆಚ್ಚಿಸಿದೆ.
ಇದರಿಂದ ಆಮದು ಮಾಡಿಕೊಳ್ಳುವ ಕಾರು, ಬೈಕ್, ವಾಚ್, ಕೂಲಿಂಗ್‌ಗ್ಲಾಸ್‌ಗಳು ದುಬಾರಿಯಾಗಲಿವೆ. ಅಲ್ಲದೆ ಸುಗಂಧ ದ್ರವ್ಯಗಳು, ಚಿನ್ನ, ವಜ್ರ, ಹಣ್ಣು, ತರಕಾರಿ ಜ್ಯೂಸ್, ಮೊಬೈಲ್ ಫೋನ್‌ಗಳು ದುಬಾರಿಯಾಗಲಿವೆ. ಆಹಾರ ಸಂಸ್ಕರಣೆ, ಇಲೆಕ್ಟ್ರಾನಿಕ್ಸ್, ವಾಹನದ ಬಿಡಿಭಾಗ, ಪಾದರಕ್ಷೆ, ಪೀಠೋಪಕರಣ ಗಳನ್ನು ಸ್ಥಳೀಯವಾಗಿ ಉತ್ಪಾದಿಸಲು ಸಾಕಷ್ಟು ಸಾಧ್ಯತೆಗಳಿವೆ. ಸ್ಥಳೀಯ ಉತ್ಪಾದನೆಗೆ ಪ್ರೋತ್ಸಾಹ ನೀಡುವ ಮೂಲಕ ‘ಮೇಕ್ ಇನ್ ಇಂಡಿಯಾ’ ಉಪಕ್ರಮಕ್ಕೆ ಉತ್ತೇಜನ ನೀಡುವ ಸಲುವಾಗಿ ಕೆಲವು ವಸ್ತುಗಳ ಮೇಲೆ ಸೀಮಾ ಸುಂಕವನ್ನು ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ . ಇದರಿಂದ ದೇಶದಲ್ಲಿ ಇನ್ನಷ್ಟು ಉದ್ಯೋಗದ ಸೃಷ್ಟಿಯಾಗಲಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.
ಕಾರು ಹಾಗೂ ಬೈಕ್‌ಗಳ ‘ಸಿಕೆಡಿ’ ಆಮದು( ಬಿಡಿಭಾಗಗಳ ಆಮದು) ಮೇಲಿನ ಸೀಮಾ ಸುಂಕವನ್ನು ಶೇ.10ರಿಂದ ಶೇ.15ಕ್ಕೇರಿಸಲಾಗಿದೆ. ‘ಸಿಬಿಡಿ’ ಆಮದು( ವಿದೇಶದಲ್ಲಿ ನಿರ್ಮಿತವಾದ ಕಾರು ಹಾಗೂ ಬೈಕ್‌ಗಳನ್ನು ಆಮದು ಮಾಡಿಕೊಳ್ಳುವುದು) ಮೇಲಿನ ಸೀಮಾ ಸುಂಕವನ್ನು ಶೇ.20ರಿಂದ ಶೇ.25ಕ್ಕೇರಿಸಲಾಗಿದೆ. ಅಲ್ಲದೆ ಆಮದು ಮಾಡಿಕೊಳ್ಳುವ ಟ್ರಕ್ ಹಾಗೂ ಬಸ್‌ಗಳ ರೇಡಿಯಲ್ ಟಯರ್‌ಗಳ ಮೇಲಿನ ಸುಂಕವನ್ನೂ ಈಗಿನ ಶೇ.10ರಿಂದ ಶೇ.15ಕ್ಕೆ ಏರಿಸಲಾಗಿದೆ. ಇದೇ ರೀತಿ, ಆಮದು ಮಾಡಿಕೊಳ್ಳುವ ಮೊಬೈಲ್ ಫೋನ್‌ಗಳ ಮೇಲಿನ ಸುಂಕವನ್ನು ಶೇ.15ರಿಂದ ಶೇ.20ಕ್ಕೇರಿಸಲಾಗಿದೆ. ಅಲ್ಲದೆ ಮೊಬೈಲ್‌ನ ಕೆಲವು ಬಿಡಿಭಾಗಗಳ ಮೇಲೆ ವಿಧಿಸಲಾಗುವ ಶುಲ್ಕವನ್ನೂ ಹೆಚ್ಚಿಸಲಾಗಿದೆ. ಆಮದು ಮಾಡಿಕೊಳ್ಳುವ ಎಲ್‌ಸಿಡಿ, ಎಲ್‌ಇಡಿ, ಒಎಲ್‌ಇಡಿ ಟಿವಿ ಪ್ಯಾನೆಲ್‌ಗಳು ಹಾಗೂ ಇತರ ಬಿಡಿಭಾಗಗಳ ಮೇಲೆ ಶೇ.15ರಷ್ಟು ಸುಂಕ ವಿಧಿಸಲಾಗುತ್ತದೆ. ಸುಗಂಧದೃವ್ಯ, ಆಮದು ಮಾಡಿಕೊಳ್ಳಲಾಗುವ ಮೇಕಪ್ ಸಾಮಗ್ರಿಗಳ ಮೇಲಿನ ಸುಂಕ ಹೆಚ್ಚಿಸಿರುವ ಕಾರಣ ಇವು ದುಬಾರಿಯಾಗಲಿವೆ.
ಕೈಗಡಿಯಾರ, ಕಿಸೆಯಲ್ಲಿ ಇಟ್ಟುಕೊಳ್ಳುವ ಗಡಿಯಾರ, ಸ್ಮಾರ್ಟ್ ವಾಚ್‌ಗಳು, ಕೂಲಿಂಗ್‌ಗ್ಲಾಸ್‌ಗಳ ಮೇಲಿನ ಸೀಮಾಸುಂಕವನ್ನು ದ್ವಿಗುಣಗೊಳಿಸಲಾಗಿದ್ದು, ಇನ್ನು ಶೇ.20ರಷ್ಟು ಸುಂಕ ವಿಧಿಸಲಾಗುತ್ತದೆ.
ತುಂಡು ಮಾಡಿದ ಹಾಗೂ ಹೊಳಪು ಮಾಡಿದ ಹರಳು, ವಜ್ರ, ಲ್ಯಾಬ್‌ನಲ್ಲಿ ಉತ್ಪಾದಿಸಿದ ವಜ್ರ, ಅರ್ಧ ತುಂಡರಿಸಿದ ಅಥವಾ ತುಂಡಾದ, ಅರೆಸಂಸ್ಕರಿಸಿದ ವಜ್ರಗಳ ಮೇಲಿನ ಸೀಮಾ ಸುಂಕವನ್ನು ಶೇ.5ಕ್ಕೇರಿಸಲಾಗಿದೆ. (ಈ ಹಿಂದೆ ಶೇ.2.5).
ಆಮದು ಮಾಡಿಕೊಳ್ಳುವ ಪಾದರಕ್ಷೆ ಹಾಗೂ ಸಿಲ್ಕ್ ಬಟ್ಟೆಗಳ ಮೇಲಿನ ಸುಂಕವನ್ನು ದ್ವಿಗುಣಗೊಳಿಸಲಾಗಿದ್ದು ಶೇ.20ಕ್ಕೆ ಹೆಚ್ಚಿಸಲಾಗಿದೆ. ಆಮದು ಮಾಡಿಕೊಳ್ಳುವ ಹಣ್ಣಿನ ರಸದ ಮೇಲಿನ ಸುಂಕವನ್ನು ದುಪ್ಪಟ್ಟುಗೊಳಿಸಲಾಗಿದ್ದು ಶೇ.40ಕ್ಕೇರಿಸಲಾಗಿದೆ. ಆಮದು ಮಾಡಿಕೊಳ್ಳುವ ಕ್ಯಾನ್‌ಬೆರಿ ರಸದ ಮೇಲೆ ಈ ಹಿಂದೆ ಶೇ.10ರಷ್ಟಿದ್ದ ಸುಂಕವನ್ನು ಶೇ.50ಕ್ಕೇರಿಸಲಾಗಿದೆ. ಆಮದು ಮಾಡಿಕೊಳ್ಳುವ ಕಿತ್ತಳೆಹಣ್ಣಿನ ರಸದ ಮೇಲಿನ ಸುಂಕವನ್ನು ಶೇ.35ಕ್ಕೆ, ಇತರ ಹಣ್ಣು ಹಾಗೂ ತರಕಾರಿ ರಸದ ಮೇಲಿನ ಸುಂಕವನ್ನು ಶೇ.30ರಿಂದ ಶೇ.50ಕ್ಕೇರಿಸಲಾಗಿದೆ.
ಆಲಿವ್ ಎಣ್ಣೆ, ನೆಲಗಡಲೆ ಎಣ್ಣೆಯ ಮೇಲಿನ ಸುಂಕವನ್ನು ಶೇ.12.5ರಿಂದ ಶೇ.30ಕ್ಕೇರಿಸಲಾಗಿದೆ. ರಿಫೈನ್ಸ್ ಎಣ್ಣೆಯ ಮೇಲಿನ ಸುಂಕವನ್ನು ಶೇ.35ಕ್ಕೆ ಹೆಚ್ಚಿಸಲಾಗಿದೆ. ಆಮದು ಮಾಡಿಕೊಳ್ಳುವ ಚಿನ್ನದ ಉತ್ಪನ್ನಗಳ ಮೇಲೆ ಶೇ.3ರಷ್ಟು ಮೇಲ್ತೆರಿಗೆ ವಿಧಿಸುವ ಕಾರಣ ಇವು ದುಬಾರಿಯಾಗಲಿವೆ. ಆದರೆ ಕಚ್ಛಾ ಗೋಡಂಬಿ ಬೀಜಗಳ ಮೇಲಿನ ಸೀಮಾ ಸುಂಕವನ್ನು ಶೇ.5ರಿಂದ ಶೇ.2.5ಕ್ಕೆ ಇಳಿಸಲಾಗಿದೆ. ಸೌರ ವಿದ್ಯುಚ್ಛಕ್ತಿ ಘಟಕಗಳಿಗೆ ಬಳಸಲಾಗುವ ‘ಸೋಲಾರ್ ಟೆಂಪರ್ಡ್ ’ ಗ್ಲಾಸ್‌ಗಳ ಮೇಲಿನ ಸುಂಕವನ್ನು ರದ್ದುಗೊಳಿಸಲಾಗಿದೆ.(ಈ ಹಿಂದೆ ಶೇ.5ರಷ್ಟು ಸುಂಕ ವಿಧಿಸಲಾಗುತ್ತಿತ್ತು). ಶ್ರವಣ ಸಾಧನಗಳಲ್ಲಿ ಬಳಸಲಾಗುವ ಕಚ್ಛಾವಸ್ತುಗಳ ಮೇಲಿನ ಸುಂಕವನ್ನು ರದ್ದುಗೊಳಿಸಲಾಗಿದೆ( ಈ ಹಿಂದೆ ಶೇ.2.5ರಷ್ಟು ಸುಂಕ ವಿಧಿಸಲಾಗುತ್ತಿತ್ತು ).







