1,000 ಬಿ.ಟೆಕ್ ವಿದ್ಯಾರ್ಥಿಗಳಿಗೆ ಫೆಲೋಶಿಪ್, 24 ಹೊಸ ವೈದ್ಯಕೀಯ ಕಾಲೇಜುಗಳ ಆರಂಭ
ಕೇಂದ್ರ ಬಜೆಟ್-2018

ಹೊಸದಿಲ್ಲಿ,ಫೆ.1: ಪಿಎಚ್‌ಡಿ ವ್ಯಾಸಂಗಕ್ಕಾಗಿ 1,000 ಪ್ರತಿಭಾವಂತ ಬಿ.ಟೆಕ್ ವಿದ್ಯಾರ್ಥಿಗಳಿಗೆ ಫೆಲೋಶಿಪ್, 24 ಹೊಸ ವೈದ್ಯಕೀಯ ಕಾಲೇಜುಗಳ ಆರಂಭ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಆರ್ಥಿಕ ನೆರವಿಗೆ ನೂತನ ವ್ಯವಸ್ಥೆ ಇವು ಗುರುವಾರ ಸಂಸತ್ತಿನಲ್ಲಿ ಮಂಡನೆಯಾದ 2018-19ನೇ ಸಾಲಿನ ಮುಂಗಡಪತ್ರದಲ್ಲಿ ಶಿಕ್ಷಣ ಕ್ಷೇತ್ರಕ್ಕಾಗಿ ಪ್ರಕಟಿಸಲಾದ ಪ್ರಮುಖ ಉಪಕ್ರಮಗಳಲ್ಲಿ ಸೇರಿವೆ.
ವಿತ್ತಸಚಿವ ಅರುಣ್ ಜೇಟ್ಲಿ ಅವರು ಮುಂದಿನ ಹಣಕಾಸು ವರ್ಷಕ್ಕಾಗಿ ಶಿಕ್ಷಣ ಕ್ಷೇತ್ರಕ್ಕಾಗಿ 85,010 ಕೋ.ರೂ.ಗಳನ್ನು ನಿಗದಿ ಮಾಡಿದ್ದಾರೆ. ಈ ಪೈಕಿ 35,010 ಕೋ.ರೂ.ಗಳನ್ನು ಉನ್ನತ ಶಿಕ್ಷಣಕ್ಕೆ ಮತ್ತು 50,000 ಕೋ.ರೂ.ಗಳನ್ನು ಶಾಲಾ ಶಿಕ್ಷಣಕ್ಕೆ ಹಂಚಿಕೆ ಮಾಡಲಾಗಿದೆ.
2022ರ ವೇಳೆಗೆ ಶಿಕ್ಷಣದಲ್ಲಿ ಮೂಲಸೌಕರ್ಯ ಮತ್ತು ವ್ಯವಸ್ಥೆಗಳ ಪುನಃಶ್ಚೇತನ ಕಾರ್ಯಕ್ರಮಕ್ಕೆ ಸರಕಾರವು ಚಾಲನೆ ನೀಡಲಿದೆ ಎಂದು ತಿಳಿಸಿದ ಜೇಟ್ಲಿ, 2022ರ ವೇಳೆಗೆ ಶೇ.50ಕ್ಕೂ ಅಧಿಕ ಪರಿಶಿಷ್ಟ ಪಂಗಡ ಜನಸಂಖ್ಯೆ ಮತ್ತು ಕನಿಷ್ಠ 20,000 ಬುಡಕಟ್ಟು ಜನರು ಇರುವ ಪ್ರತಿಯೊಂದೂ ಬ್ಲಾಕ್ ನವೋದಯ ವಿದ್ಯಾಲಯಗಳಿಗೆ ಸಮನಾದ ‘ಏಕಲವ್ಯ’ಶಾಲೆಯನ್ನು ಹೊಂದಲಿದೆ ಎಂದರು.
ಎರಡು ಪೂರ್ಣ ಪ್ರಮಾಣದ ಶಾಲೆಗಳು ಸೇರಿದಂತೆ ಒಟ್ಟು 20 ಯೋಜನಾ ಮತ್ತು ವಾಸ್ತುಶಿಲ್ಪ ಶಾಲೆಗಳನ್ನು ಐಐಟಿ ಮತ್ತು ಎನ್‌ಐಟಿಗಳ ಅಧೀನದಲ್ಲಿ ಸ್ವಾಯತ್ತ ಸಂಸ್ಥೆಗಳನ್ನಾಗಿ ಸ್ಥಾಪಿಸಲಾಗುವುದು ಎಂದೂ ಜೇಟ್ಲಿ ಪ್ರಕಟಿಸಿದರು.
ಐಐಟಿಗಳು ಮತ್ತು ಐಐಎಸ್‌ಸಿಯಲ್ಲಿ ಪಿಎಚ್‌ಡಿ ವ್ಯಾಸಂಗಕ್ಕಾಗಿ ದೇಶದಲ್ಲಿಯ ಅತ್ಯುನ್ನತ 1,000 ಬಿ.ಟೆಕ್ ವಿದ್ಯಾರ್ಥಿಗಳಿಗಾಗಿ ಪ್ರಧಾನಮಂತ್ರಿ ಫೆಲೋಶಿಪ್ ಯೋಜನೆಯನ್ನೂ ಮುಂಗಡಪತ್ರದಲ್ಲಿ ಪ್ರಕಟಿಸಲಾಗಿದೆ.
ದೇಶದಲ್ಲಿ ವೈದ್ಯರ ಕೊರತೆಯನ್ನು ನೀಗಿಸಲು ಹಾಲಿ ಇರುವ ಜಿಲ್ಲಾಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವ ಮೂಲಕ 24 ನೂತನ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ಸರಕಾರವು ನಿರ್ಧರಿಸಿದೆ. ಪ್ರತಿ ಮೂರು ಲೋಕಸಭಾ ಕ್ಷೇತ್ರಗಳಿಗೆ ಕನಿಷ್ಠ ಒಂದು ವೈದ್ಯಕೀಯ ಕಾಲೇಜು ಸ್ಥಾಪನೆಗೆ ಉದ್ದೇಶಿಸಲಾಗಿದೆ.
ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಪ್ರಮುಖ ಸುಧಾರಣಾ ಕ್ರಮವಾಗಿ ಕೇಂದ್ರ ನೆರವಿನ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೂಲಸೌಕರ್ಯ ನಿಧಿಗಾಗಿ ಹೊಸ ಮಾದರಿಯೊಂದನ್ನೂ ಸರಕಾರವು ಪ್ರಕಟಿಸಿದೆ.