ಸಂಸದರ ವೇತನ 5 ವರ್ಷಕ್ಕೊಮ್ಮೆ ಸ್ವಯಂಚಾಲಿತ ಏರಿಕೆ

ಹೊಸದಿಲ್ಲಿ, ಫೆ.1: ಹಣದುಬ್ಬರಕ್ಕೆ ಅನುಗುಣವಾಗಿ ಪ್ರತಿ ಐದು ವರ್ಷಗಳಿಗೊಮ್ಮೆ ಸಂಸದರ ವೇತನ ಸ್ವಯಂಚಾಲಿತವಾಗಿ ಪರಿಷ್ಕರಣೆ ಯಾಗುವಂತೆ ಕಾನೂನು ರೂಪಿಸಲು ಅರುಣ್ ಜೇಟ್ಲಿ ಗುರುವಾರ ಪ್ರಸ್ತಾಪಿಸಿದರು. ಸಂಸದರಿಗೆ ನೀಡುತ್ತಿರುವ ವೇತನದ ಬಗ್ಗೆ ಸಾರ್ವಜನಿಕ ಚರ್ಚೆ ನಡೆಯುತ್ತಿದೆ. ಈಗ ಅನುಸರಿಸುತ್ತಿರುವ ತಮ್ಮ ವೇತನವನ್ನು ತಾವೇ ನಿಗಿದಿಗೊಳಿಸುವುದಕ್ಕೆ ಅವಕಾಶ ನೀಡುವುದರ ಬಗ್ಗೆ ವಿಮರ್ಶೆ ಆಹ್ವಾನಿಸಲಾಗಿತ್ತು ಎಂದು ಅವರು ಹೇಳಿದರು. ಆದುದರಿಂದ ನಾನು ಸಂಸದರಿಗೆ ನೀಡುವ ವೇತನ ಮರು ನಿಗದಿ, ಕ್ಷೇತ್ರ ಭತ್ತೆ, ಕಚೇರಿ ಖರ್ಚು ಹಾಗೂ ಸಭೆ ಭತ್ತೆಯಲ್ಲಿ 2018 ಎಪ್ರಿಲ್ 1ರಿಂದ ಅತ್ಯಗತ್ಯದ ಬದಲಾವಣೆಗೆ ಪ್ರಸ್ತಾಪಿಸುತ್ತಿದ್ದೇನೆ ಎಂದು ಅವರು ಹೇಳಿದರು.
ಹಣದುಬ್ಬರದ ಸೂಚ್ಯಾಂಕಕ್ಕೆ ಅನುಗುಣವಾಗಿ ಪ್ರತಿ ಐದು ವರ್ಷಗಳಿಗೊಮ್ಮೆ ಸಂಸದರ ವೇತನ ಪರಿಷ್ಕರಣೆಗೆ ಕಾನೂನು ತರಲಾಗುವುದು. ಈ ಉಪಕ್ರಮಗಳನ್ನು ಸಂಸದರು ಸ್ವಾಗತಿಸಲಿದ್ದಾರೆ. ಅಲ್ಲದೆ, ಭವಿಷ್ಯದಲ್ಲಿ ಈ ಬಗ್ಗೆ ಟೀಕೆಗೆ ಒಳಗಾಗುವುದು ತಪ್ಪುತ್ತದೆ ಎಂದು ಅವರು ಹೇಳಿದ್ದಾರೆ. 50 ಸಾವಿರ ರೂ. ಮೂಲ ವೇತನ ಸೇರಿದಂತೆ ಸಂಸದರ ಗೌರವ ಧನ ತಿಂಗಳಿಗೆ 50 ಸಾವಿರ ರೂ. ಹಾಗೂ ಇತರ ಭತ್ತೆಗಳನ್ನು ಹೊರತು ಪಡಿಸಿ ಕ್ಷೇತ್ರ ಭತ್ತೆ 45 ಸಾವಿರ ರೂ. ಎಂದು ಅವರು ತಿಳಿಸಿದ್ದಾರೆ.
ಸರಕಾರ ಪ್ರತಿ ಸಂಸದರಿಗೆ ತಿಂಗಳಿಗೆ 2.7 ಲಕ್ಷ ರೂ. ವೆಚ್ಚ ಮಾಡುತ್ತದೆ ಎಂದು ಅರುಣ್ ಜೇಟ್ಲಿ ತಿಳಿಸಿದ್ದಾರೆ.







